ಸಾರಾಂಶ
ಹೂವಿನಹಡಗಲಿ: ಹೂವಿನಹಡಗಲಿ ತಹಸೀಲ್ದಾರ್ ಕೆ.ಶರಣಮ್ಮ ಅವರು ಬ್ಯಾಡಗಿಯಲ್ಲಿ ತಹಸೀಲ್ದಾರ್ ಆಗಿ ಸೇವೆಯಲ್ಲಿದ್ದಾಗ 29 ಅನರ್ಹ ರೈತರಿಗೆ ಬೆಳೆಹಾನಿ ಪರಿಹಾರ ನೀಡಿರುವುದು ಸಾಬೀತಾದ ಹಿನ್ನಲೆಯಲ್ಲಿ ಸರ್ಕಾರ ಅವರನ್ನು ಸೇವೆಯಿಂದ ಅಮಾನತು ಮಾಡಿದೆ.
ಹಾವೇರಿಯ ಅಪರ ಜಿಲ್ಲಾಧಿಕಾರಿಯವರು ನೀಡಿರುವ ದೂರಿನಲ್ಲಿ, ಕೆ. ಶರಣಮ್ಮ ಅವರು 2019ರಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿಯ ತಹಸೀಲ್ದಾರ್ ಆಗಿದ್ದ ವೇಳೆ ಅತಿವೃಷ್ಟಿಯಿಂದ ಬೆಳೆಹಾನಿ ಪರಿಹಾರವನ್ನು 29 ಅನರ್ಹ ಫಲಾನುಭವಿಗಳಿಗೆ ನೀಡಿದ್ದರು.
ಇದರಿಂದ ₹8,57,338 ಸರ್ಕಾರದ ಹಣ ಅನರ್ಹ ಫಲಾನುಭವಿಗಳ ಖಾತೆಗೆ ಜಮೆಯಾಗಿತ್ತು. ಅಲ್ಲದೇ ಸರ್ಕಾರಕ್ಕೆ ಮತ್ತು ಜಮೀನಿನ ಮೂಲ ಮಾಲೀಕರಿಗೆ ವಂಚನೆ ಮಾಡಿದ್ದಾರೆಂದು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ತಹಸೀಲ್ದಾರರ ವಿರುದ್ಧ ಮಾಡಲಾದ ಆರೋಪವು ತನಿಖೆಯಿಂದ ಮೇಲ್ನೋಟಕ್ಕೆ ಸಾಬೀತಾಗಿತ್ತು.
ತಹಸೀಲ್ದಾರರು ಕರ್ತವ್ಯಲೋಪ ಎಸಗಿ ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಾವಳಿಗಳು 2021ರ ನಿಯಮ 3(1) (2) (3) (4) (5) (6)ನ್ನು ಉಲ್ಲಂಘಿಸಿದ್ದರು.
ಹೀಗಾಗಿ ತಹಸೀಲ್ದಾರ್ ಕೆ. ಶರಣಮ್ಮ ಅವರನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 10(1)(ಡಿ)ರ ಅನ್ವಯ ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಅಲ್ಲದೇ ಕೆ. ಶರಣಮ್ಮ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿಗೆ ವರ್ಗಾಯಿಸಿ, ಸರ್ಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ ಆದೇಶ ಹೊರಡಿಸಿದ್ದಾರೆ.