ಸಾರಾಂಶ
ಹಣದ ಆಸೆಗೆ ಇಬ್ಬರು ಕಂದಾಯ ಇಲಾಖೆ ಸಿಬ್ಬಂದಿ ಹಿರಿಯ ಅಧಿಕಾರಿಗಳ ಕಣ್ಣಿಗೆ ಮಣ್ಣೇರಚಿ ಯಾವುದೇ ದಾಖಲೆಗಳಿಲ್ಲದೇ 24 ಎಕರೆ ಜಮೀನಿನ ಮಾಲೀಕತ್ವವನ್ನೇ ಬದಲಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಣದ ಆಸೆಗೆ ಇಬ್ಬರು ಕಂದಾಯ ಇಲಾಖೆ ಸಿಬ್ಬಂದಿ ಹಿರಿಯ ಅಧಿಕಾರಿಗಳ ಕಣ್ಣಿಗೆ ಮಣ್ಣೇರಚಿ ಯಾವುದೇ ದಾಖಲೆಗಳಿಲ್ಲದೇ 24 ಎಕರೆ ಜಮೀನಿನ ಮಾಲೀಕತ್ವವನ್ನೇ ಬದಲಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಬಿ.ನಿರಂಜನ್ ಮತ್ತು ಬೆಳಗಾವಿ ತಹಸೀಲ್ದಾರ್ ಕಚೇರಿಯ ಭೂಮಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಯು.ವಿ.ಖಾತೇದಾರ್ ಅಮಾನತುಗೊಂಡವರು.
ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಸರ್ವೆ ನಂ.59/3ರಲ್ಲಿ 10 ಎಕರೆ 12 ಗುಂಟೆ ಮತ್ತು ಹೊನಗಾ ಗ್ರಾಮದ ಸರ್ವೇ ನಂ.532ರಲ್ಲಿನ 14 ಎಕರೆ 12 ಗುಂಟೆ ಜಮೀನಿ ಮಾಲೀಕ ಪಾಟೀಲ್ ವಿಶ್ವಪಾಲ್ ರುದ್ರಗೌಡ ಅವರ ಹೆಸರನ್ನು ತೆಗೆದುಹಾಕಿ, ಹೊಸ ಮಾಲೀಕ ಕಡೋಲ್ಕರ್ ಶಂಕರ್ ಸಿದ್ದಪ್ಪ ಮತ್ತು ಕಡೋಲ್ಕರ್ ಶಂಕರ್ ಸಿದ್ರಾಯಿ ಅವರನ್ನು ಕ್ರಮವಾಗಿ ಸೇರಿಸಲಾಗಿದೆ. ಆಯಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳಿಂದ ಯಾವುದೇ ದಾಖಲೆ ಹಾಗೂ ವರದಿ ಇಲ್ಲದೆಯೇ ಈ ಮ್ಯುಟೇಶನ್ ನಮೂದಿಸಲಾಗಿದೆ.ಬೆಳಗಾವಿಯ ಉಪವಿಭಾಗಾಧಿಕಾರಿ ಮುಂದೆ ಇಬ್ಬರೂ ಸಿಬ್ಬಂದಿ ಲಿಖಿತ ಹೇಳಿಕೆಯಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಅವರು ಶಿಸ್ತು ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ವರದಿಯನ್ನು ಕಳುಹಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಈ ಇಬ್ಬರು ಸಿಬ್ಬಂದಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1966 ನಿಯಮ (3)1, 2 ಮತ್ತು 3 ಅನ್ನು ಉಲ್ಲಂಘಿಸಿ ಕೆಲಸ ಮಾಡಿದ್ದಾರೆ ಎಂದು ಉಲ್ಲೇಖಿಸಿ, ಇಲಾಖಾ ವಿಚಾರಣೆ ಬಾಕಿಯಿಟ್ಟು ಸೇವೆಯಿಂದ ಅಮಾನತುಗೊಳಿಸಲಾಗಿದೆ.