ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ, ನಾಲೆಗಳಿಗೆ ನೀರು ನಿಲುಗಡೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು.

ಮದ್ದೂರು - ಮಳವಳ್ಳಿ ಹೆದ್ದಾರಿಯ ಇಲ್ಲಿನ ವಿಶ್ವೇಶ್ವರಯ್ಯ ವೃತ್ತದ ಬಳಿ‌ ಧರಣಿ ಕುಳಿತು ರಸ್ತೆ ತಡೆ ನಡೆಸಿ, ವಾಹನಗಳ ಸಂಚಾರಕ್ಕೆ ಕೆಲಕಾಲ ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಬೋರಪುರದ ಶಂಕರೇಗೌಡ, ಕಾವೇರಿ ನೀರಾವರಿ ನಿರ್ಮಾಣ ಸಮಿತಿ ನೀಡಿರುವ ಆದೇಶವನ್ನು ಧಿಕ್ಕರಿಸಬೇಕು. ನಮಗೆ ಇಲ್ಲಿ ನೀರಿಲ್ಲದೆ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ತಮಿಳುನಾಡಿಗೆ ನೀರು ಬಿಟ್ಟಿರುವುದು ಅನ್ಯಾಯ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಪ್ರಸ್ತುತ ಬರಗಾಲ ಪರಿಸ್ಥಿತಿ ಎದುರಾಗಿದೆ. ಜನ- ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಕೆರೆ- ಕಟ್ಟೆಗಳು ಬತ್ತಿ ಹೋಗಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾಲೆಗಳಿಂದ ಹರಿಯುತ್ತಿದ್ದ ನೀರನ್ನು ನಿಲ್ಲಿಸಿರುವುದನ್ನು ಖಂಡಿಸಿದರು.


ಪ್ರಸಕ್ತ ಸಾಲಿಗೆ ಕಾವೇರಿ ಜಲಾನಯನ ಪ್ರಾಂತ್ಯ ಪ್ರದೇಶವನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಎನ್ ಡಿ ಆರ್ ಎಫ್ ಹಾಗೂ ಬಿಡಿಆರ್ ಎಫ್ ನಡಿ ಪ್ರತಿ ಎಕರೆಗೆ ₹50 ಸಾವಿರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ವಿನೋದ್ ಬಾಬು ಮಾತನಾಡಿ, ಹೊಸ ಬೆಳೆ ಬೆಳೆಯಲು ನೀರಿಲ್ಲ. ಇರೋ ಬೆಳೆಗಳ ಉಳಿಸಲು ನೀರು ಅಗತ್ಯವಾಗಿದೆ. ಬೋರ್ ವೆಲ್ ಗಳು ಬತ್ತಿ ಹೋಗುತ್ತಿವೆ. ವಿಸಿ ನಾಲೆಯಲ್ಲಿ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪುವ ಮೊದಲೇ ನೀರು ನಿಲ್ಲಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿ.ಸಿ.ನಾಲೆಗಳ ನೀರು ನಿಲ್ಲಿಸಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ರೈತರಿಗೆ ಮರಣ ಶಾಸನ‌ ಬರೆದಂತೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸರ್ಕಾರ ಸರಿಯಾದ ವಾದ ಮಂಡಿಸಿ ಸಮಿತಿಗೆ ಪ್ರಸ್ತುತ ಕಾವೇರಿ ಕಣಿವೆ ಸಮಸ್ಯೆ ಮನದಟ್ಟು ಮಾಡಿಸಿ, ಎರಡು ರಾಜ್ಯಗಳ ಪರಿಸ್ಥಿತಿ ಅವಲೋಕಿಸಲಿ, ತೀರ್ಪನ್ನು ಕರ್ನಾಟಕದ ಪರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಲಿಂಗಪ್ಪಾಜಿ, ಉಪಾಧ್ಯಕ್ಷ ಶಂಕರ್, ಖಜಾಂಚಿ ಶೆಟ್ಟಹಳ್ಳಿ ರವಿಕುಮಾರ್, ರಾಮೇಗೌಡ, ದಯಾನಂದ, ಸಿದ್ದರಾಜು, ರಮೇಶ ಮತ್ತಿತರರು ಇದ್ದರು.