ಅನೈತಿಕ ಸಂಬಂಧ ಶಂಕೆ: ಚಾಕುವಿನಿಂದ ಇರಿದು ಪ್ರಿಯತಮೆಯ ಕೊಲೆ

| Published : Jun 25 2024, 12:38 AM IST / Updated: Jun 25 2024, 01:01 PM IST

ಸಾರಾಂಶ

ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪ್ರಿಯತಮೆಯನ್ನು ಪ್ರಿಯಕರನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ನಗರದಲ್ಲಿ ನಡೆದಿದೆ.

 ಹೊಸಕೋಟೆ : ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪ್ರಿಯತಮೆಯನ್ನು ಪ್ರಿಯಕರನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ನಗರದಲ್ಲಿ ನಡೆದಿದೆ.

ಆಂಧ್ರಪ್ರದೇಶ ಮೂಲದ ಹೇಮಾವತಿ(32) ಕೊಲೆಯಾದ ಮಹಿಳೆಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಟೌನ್‌ನ ವೇಣುಗೋಪಾಲ್(35) ಕೊಲೆ ಮಾಡಿರುವ ಪ್ರಿಯಕರನಾಗಿದ್ದಾನೆ.

ಕೊಲೆಯಾದ ಹೇಮಾವತಿ ಹಾಗೂ ಕೊಲೆ ಮಾಡಿದ ವೇಣುಗೋಪಾಲ್ ಇಬ್ಬರೂ ಬೇರೆ ಬೇರೆ ಮದುವೆಯಾಗಿದ್ದರೂ ಸಹ ಅನೈತಿಕ ಸಂಬಂಧ ಹೊಂದಿ ಹೊಸಕೋಟೆ ನಗರದಲ್ಲಿ ವಾಸವಾಗಿದ್ದರು. ಇದರ ನಡುವೆ ಹೇಮಾವತಿ ಬೇರೊಬ್ಬ ಪುರುಷನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಶಂಕಿಸಿ ವೇಣುಗೋಪಾಲ್ ಭಾನುವಾರ ರಾತ್ರಿ ಗಲಾಟೆ ಮಾಡಿ ಚಾಕುವಿನಿಂದ ಹೊಟ್ಟೆಯ ಕೆಳಭಾಗಕ್ಕೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನ:

ಕೊಲೆ ಮಾಡಿ ಪರಾರಿಯಾಗಿದ್ದ ವೇಣುಗೋಪಾಲ್ ಸೋಮವಾರ ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಳಿಕ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ಹೇಮಾವತಿಯನ್ನು ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು, ಚಿಕ್ಕಬಳ್ಳಾಪುರ ಪೊಲೀಸರು ಹೊಸಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೊಸಕೋಟೆ ಡಿವೈಎಸ್ಪಿ ಅಣ್ಣಾಸಾಹೇಬ್ ಪಾಟೀಲ್, ಇನ್ಸ್ಪೆಕ್ಟರ್ ಅಶೋಕ್ ಸೇರಿ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.