ಪಟ್ಟಣದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಣೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, 84,500 ರು. ಮೌಲ್ಯದ ಟಂಟಂ ವಾಹನ ಮತ್ತು ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಹಿಂದಿನ ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಅಮಾನತುಗೊಂಡ ಘಟನೆ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಆಳಂದ ಪಟ್ಟಣದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಣೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, 84,500 ರು. ಮೌಲ್ಯದ ಟಂಟಂ ವಾಹನ ಮತ್ತು ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಹಿಂದಿನ ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಅಮಾನತುಗೊಂಡ ಘಟನೆ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಪಟ್ಟಣದ ಉಮರ್ಗಾ ರಸ್ತೆಯ ಕುಮಾರ ಹೋಟೆಲ್ ಸಮೀಪ ಅ.24ರಂದು ಸಂಜೆ 7.30ರ ವೇಳೆಗೆ ಟಂಟಂ ವಾಹನ ನಿಂತಿರುವುದನ್ನು ಗಮನಿಸಿದ ಆಳಂದ ಪೊಲೀಸ್ ಠಾಣೆಯ ಸಿಬ್ಬಂದಿ ಚಂದ್ರಶೇಖರ ವಾಹನ ಪರಿಶೀಲಿಸಿದಾಗ 15 ಚೀಲ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿ ಸಾರ್ವಜನಿಕರಿಗೆ ಪಡಿತರ ಚೀಟಿಗಳ ಮೂಲಕ ವಿತರಿಸುವ ಸರ್ಕಾರಿ ಅಕ್ಕಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಹನವನ್ನು ಠಾಣೆಗೆ ತರಿಸಿ ಆಹಾರ ಇಲಾಖೆಯ ಅಧಿಕಾರಿಗಳ ಪರಿಶೀಲನೆಗೆ ಒಳಪಡಿಸಲಾಯಿತು.

ಆಳಂದ ಆಹಾರ ನಿರೀಕ್ಷಕಿ ಶ್ರೀದೇವಿ ಮಠಪತಿ ಭಾನುವಾರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪಂಚರ ಸಮಕ್ಷಮದಲ್ಲಿ ಅಕ್ಕಿ ಚೀಲಗಳನ್ನು ಪರಿಶೀಲಿಸಿ ಜಪ್ತಿ ಪಂಚನಾಮೆ ನಡೆಸಿದರು. ಬಳಿಕ ಅಕ್ಕಿ ಹಾಗೂ ವಾಹನವನ್ನು ತೂಕ ಮಾಡಿದ್ದು, ಒಟ್ಟು 15 ಚೀಲಗಳಲ್ಲಿದ್ದ ಅಕ್ಕಿಯ ನಿವ್ವಳ ತೂಕ 700 ಕೆ.ಜಿ. ಆಗಿತ್ತು. ಅಕ್ಕಿ ಚೀಲಗಳನ್ನು ಸರ್ಕಾರಿ ಉಗ್ರಾಣ ವ್ಯವಸ್ಥಾಪಕರಿಗೆ ಒಪ್ಪಿಸಲಾಗಿದ್ದು, ಜಪ್ತಿ ಪಂಚನಾಮೆ ಹಾಗೂ ತೂಕದ ರಸೀದಿಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ.

* ಸತತ ಅಕ್ಕಿ ಅಕ್ರಮ ಸಾಗಾಟ: ಹಿಂದಿನ ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಅಮಾನತುಗೊಂಡ ಘಟನೆ ಇನ್ನೂ ಸಾರ್ವಜನಿಕ ಚರ್ಚೆಯಲ್ಲಿರುವಾಗಲೇ ಮತ್ತೊಂದು ಅಕ್ಕಿ ಪ್ರಕರಣ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿದೆ. ಪಡಿತರ ವ್ಯವಸ್ಥೆಯ ಅಕ್ಕಿ ಅಕ್ರಮವಾಗಿ ಸಾಗಣೆಯಾಗುತ್ತಿದೆಯೇ, ಅದರ ಮೂಲ ಯಾವುದು ಮತ್ತು ಸಾಗಣೆಯ ಹಿಂದಿರುವವರು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಜಪ್ತಿಯಾದ ಅಕ್ಕಿ ಪಡಿತರರದ್ದೇ? ಅದನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತೇ? ಎಂಬುದು ತನಿಖೆಯಿಂದ ಖಚಿತವಾಗಬೇಕಿದೆ.