ಕನ್ನಡಪ್ರಭ ವಾರ್ತೆ ಪಾವಗಡ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿರುವ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಶನಿವಾರ ನಡೆದಿದೆ.ಮೃತ ಬಾಲಕಿ ಪ್ರಿಯಾ (14)ಎಂದು ಗುರ್ತಿಸಲಾಗಿದೆ. ತಾಲೂಕಿನ ಕಾರನಾಗನಹಟ್ಡಿ ಗ್ರಾಮದ ವಾಸಿ ಪ್ರಿಯಾ ಸಮೀಪದ ರಂಗಸಮುದ್ರ ಗ್ರಾಮದ ಕಸ್ತೂರಿ ಭಾ ಗಾಂಧಿ ವಸತಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಮನೆಯಿಂದ ಆ.7ರಂದು ವಸತಿ ಶಾಲೆಗೆ ತೆರಳಿದ್ದಾಳೆ. ಬಳಿಕ ಆ.8ರಂದು ವಸತಿ ಶಾಲೆಯಲ್ಲಿ ಬಾಲಕಿಯ ಅಸ್ವಸ್ಥ ಸ್ಥಿತಿ ಕುರಿತು ಅಲ್ಲಿನ ಮುಖ್ಯೋಪಾಧ್ಯಾಯರು ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ.ಸ್ಥಳಕ್ಕೆ ಅಗಮಿಸಿದ ಫೋಷಕರು ತಕ್ಷಣವೇ ಆಕೆಯನ್ನು ಸಮೀಪದ ತಾಲೂಕಿನ ಲಿಂಗದಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಪರೀಕ್ಷಿಸಿದ ಅಲ್ಲಿನ ವೈದ್ಯರು ಬಾಲಕಿ ಆಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿರುವುದಾಗಿ ತಿಳಿದು ಬಂದಿದೆ.
ಶಾಲೆಗೆ ದಾಖಲಾಗಿದ್ದ ಮರು ದಿನವೇ ಈಕೆ ಮೃತಪಟ್ಟಿದ್ದು ಆನೇಕ ಅನುಮಾನಗಳಿಗೆ ಎಡೆ ಮಾಡಿದೆ. ಮೂಲಭೂತ ಸೌಕರ್ಯಗಳ ತೀವ್ರ ಅಭಾವವಿದ್ದು ವಿದ್ಯಾರ್ಥಿಗಳು ನಾನಾ ರೀತಿಯ ಸಮಸ್ಯೆ ಎದುರಿಸುತ್ತಿರುವುದಾಗಿ ಸಾರ್ವಜನಿಕರು ಹಾಗೂ ಪೋಷಕರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಸತಿ ಶಾಲೆಯ ಮುಖ್ಯ ಶಿಕ್ಷಕರಾದ ಲಕ್ಷಮ್ಮ ಮಾತನಾಡಿ ಸಮಸ್ಯೆಗಳ ಕುರಿತು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಅಗತ್ಯ ಸೌಲಭ್ಯಗಳು ಇನ್ನೂ ತಲುಪಿಲ್ಲ ಎಂದು ತಿಳಿಸಿದ್ದಾರೆ.ಘಟನೆ ಸಂಬಂಧ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಕೊಟ್ರೇಶ್ ಹಾಗೂ ಪಿಎಸ್ ಐ ರಾಜೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.