ಸಾರಾಂಶ
ರೇಷ್ಮೆ ಹುಳು ಸಾಕುವ ಮನೆಯಲ್ಲಿ ಕುತ್ತಿಗೆಗೆ ಸೀರೆಯಿಂದ ಬಿಗಿಯಾಗಿ ಸುತ್ತಿರುವ ರೀತಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ತಾಲೂಕಿನ ವಿರೂಪಸಂದ್ರದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕನಕಪುರ
ರೇಷ್ಮೆ ಹುಳು ಸಾಕುವ ಮನೆಯಲ್ಲಿ ಕುತ್ತಿಗೆಗೆ ಸೀರೆಯಿಂದ ಬಿಗಿಯಾಗಿ ಸುತ್ತಿರುವ ರೀತಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ತಾಲೂಕಿನ ವಿರೂಪಸಂದ್ರದಲ್ಲಿ ನಡೆದಿದೆ. ಕೊಲೆ ಶಂಕೆ ವ್ಯಕ್ತಪಡಿಸಿರುವ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಓರ್ವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ತಾಲೂಕಿನ ಕಸಬಾ ಹೋಬಳಿಯ ವಿರೂಪಸಂದ್ರ ಗ್ರಾಮದ ಮುನಿರತ್ನಮ್ಮ(44) ಮೃತ ಮಹಿಳೆ. ಅದೇ ಗ್ರಾಮದ ಪುಟ್ಟಸ್ವಾಮಿ ಮತ್ತು ಅವರ ಮಕ್ಕಳಾದ ಜೈರಾಮ್, ಜಯಸಿಂಹ ಮೇಲೆ ಪ್ರಕರಣ ದಾಖಲಾಗಿದ್ದು, ಪುಟ್ಟಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇ 10ರಂದು ಬೆಳಗ್ಗೆ ವಿರೂಪಸಂದ್ರದ ಗ್ರಾಮದ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಮುನಿರತ್ನಮ್ಮ ಸೀರೆಯಿಂದ ಕುತ್ತಿಗೆ ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದವರು. ಮೃತ ಮಹಿಳೆಯ ಮಗ ಕಿಶೋರ್ ಪೊಲೀಸರಿಗೆ ಮಾಹಿತಿ ನೀಡಿ, ನನ್ನ ತಂದೆ ತೀರಿಕೊಂಡ ಮೇಲೆ ನಮ್ಮ ತಾಯಿ ಗ್ರಾಮದ ಪುಟ್ಟಸ್ವಾಮಿ ಅವರೊಂದಿಗೆ ರೇಷ್ಮೆ ಕೃಷಿ ಮಾಡುತ್ತಿದ್ದರು. ಈ ವಿಚಾರದಲ್ಲಿ ಪುಟ್ಟಸ್ವಾಮಿಯವರ ಮಕ್ಕಳಾದ ಜಯರಾಮ್ ಮತ್ತು ಜಯಸಿಂಹ ಇಬ್ಬರು ನನ್ನ ತಾಯಿ ಮತ್ತು ಅವರ ತಂದೆ ಮೇಲೆ ಅನೈತಿಕ ಸಂಬಂಧ ಹೊರಿಸಿ ಆಗಾಗ ಬಂದು ಜಗಳ ಮಾಡುವುದು, ಹಲ್ಲೆ ಮಾಡುತ್ತಿದ್ದರು ಎಂದು ಮೃತಳ ಪುತ್ರ ದೂರಿದ್ದಾನೆ.ನನ್ನ ತಾಯಿ ಸಾವಿಗೆ ಪುಟ್ಟಸ್ವಾಮಿ ಮತ್ತು ಅವರ ಮಕ್ಕಳೇ ಕಾರಣ ಎಂದು ಹೇಳಿದ್ದಾನೆ.