೩೦ ದಿನಗಳ ಉನ್ನತಿ ನೆಕ್ಸ್ಟ್‌ ಜೀವನ ಕೌಶಲ್ಯ ತರಬೇತಿ ತರಗತಿಗಳಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಕುಮಟಾ

ಎಲ್ಲ ಕ್ಷೇತ್ರಗಳಲ್ಲಿ ಸಹಸ್ರಾರು ಸುಶಿಕ್ಷಿತರನ್ನು ನೀಡಿರುವ ಕೆನರಾ ಕಾಲೇಜು ಸೊಸೈಟಿ ತನ್ನ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕೋಶದ ಮೂಲಕ ಜೀವನ ಕೌಶಲ್ಯದಂತಹ ಅತಿಆದ್ಯತೆಯ ತರಬೇತಿ ಆಯೋಜಿಸಿ ಸುಸ್ಥಿರ ವೃತ್ತಿಯೆಡೆಗೆ ಕೈಹಿಡಿದು ನಡೆಸುತ್ತಾ ಬಂದಿದೆ. ತರಬೇತಿಯ ಪ್ರಯೋಜನ ಪಡೆದುಕೊಂಡು ಉಜ್ವಲ ಭವಿಷ್ಯ ತಮ್ಮದಾಗಿಸಿಕೊಳ್ಳಿ ಎಂದು ಪತ್ರಕರ್ತ ಶಂಕರ ಶರ್ಮಾ ಹೇಳಿದರು.

ಇಲ್ಲಿನ ಕೆನರಾ ಕಾಲೇಜು ಸೊಸೈಟಿ ಡಾ. ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವೃತ್ತಿ ಮಾರ್ಗದರ್ಶನ ಕೋಶದೊಂದಿಗೆ ಎಸ್‌ಜಿಬಿಎಸ್ ಉನ್ನತಿ ಫೌಂಡೇಶನ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೩೦ ದಿನಗಳ ಉನ್ನತಿ ನೆಕ್ಸ್ಟ್‌ ಜೀವನ ಕೌಶಲ್ಯ ತರಬೇತಿ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಹಲವು ವರ್ಷಗಳ ಹಿಂದೆ ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಇಂಥ ಜೀವನ ಕೌಶಲ್ಯ ತರಬೇತಿ, ವೃತ್ತಿ ಮಾರ್ಗದರ್ಶನ ಲಭ್ಯವಿರಲಿಲ್ಲ. ಅವಕಾಶಗಳಿಗೆ ತೆರೆದುಕೊಳ್ಳುವುದು ಕಷ್ಟವಿತ್ತು. ಇಂದು ಉನ್ನತಿ ಫೌಂಡೇಶನ್ ನಂತಹ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳ ಮೂಲಕ ಆ ಕಾರ್ಯ ಮಾಡುತ್ತಿದೆ. ವಿದ್ಯಾರ್ಥಿಗಳು ಅಹಂಕಾರ ಗುಣದಿಂದ ದೂರವಿದ್ದು ದೇಶ-ಧರ್ಮದ ಅಭಿಮಾನ ಬೆಳೆಸಿಕೊಳ್ಳಿ ಎಂದು ಶುಭ ಹಾರೈಸಿದರು.


ಕೆನರಾ ಕಾಲೇಜು ಸೊಸೈಟಿ ಚೇರ್‌ಮನ್ ಹನುಮಂತ ಕೆ. ಶಾನಭಾಗ ಮಾತನಾಡಿ, ಪದವಿ ಅಥವಾ ಉದ್ಯೋಗ ಗಳಿಕೆಯೊಂದೇ ಬದುಕಿನ ಸಫಲತೆಗೆ ಸಾಲದು, ನಿರ್ದಿಷ್ಟ ಸಾಧನೆ ಮತ್ತು ಬದುಕಿನ ಉನ್ನತಿಗೆ ಜೀವನ ಕೌಶಲ್ಯ ಬೇಕು ಎಂದರು.

ಸೊಸೈಟಿಯ ಸದಸ್ಯರಾದ ಪವನ ಪ್ರಭು, ಸಂದೀಪ ನಾಯಕ ಮಾತನಾಡಿದರು. ಪ್ರಾಚಾರ್ಯ ಡಾ. ವಿನಾಯಕ ಎಸ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಡಾ. ಪ್ರಕಾಶ ಪಂಡಿತ ಸ್ವಾಗತಿಸಿದರು.

ತರಬೇತಿಯ ಸಂಪನ್ಮೂಲ ವ್ಯಕ್ತಿ ಉನ್ನತಿ ಫೌಂಡೇಶನ್‌ನ ಎಂ.ಎ. ಬಾಬ್ಬಿ, ಸಂಸ್ಥೆಯ ಕಾರ್ಯಯೋಜನೆಗಳು ಹಾಗೂ ತರಬೇತಿಯ ಸಮಗ್ರ ಚಿತ್ರಣ ನೀಡಿದರು. ಡಾ. ಶಿವಾನಂದ ಬುಳ್ಳಾ ವಂದಿಸಿದರು. ವಿದ್ಯಾರ್ಥಿನಿಯರಾದ ದೀಕ್ಷಾ ಹಾಗೂ ಸಿಂಧು ನಿರ್ವಹಿಸಿದರು. ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.