ಸಾರಾಂಶ
ಹೊಸಪೇಟೆ: ದೇಶದ ಅಭಿವೃದ್ಧಿಗಾಗಿ ಮಕ್ಕಳ ಸುಸ್ಥಿರ ಬೆಳವಣಿಗೆ ಬಹುಮುಖ್ಯವಾಗಿದೆ. ಮಕ್ಕಳ ಹಿತ ರಕ್ಷಣೆಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ” ಶೀರ್ಷಿಕೆ ಅಡಿಯಲ್ಲಿ ಆರ್.ಟಿ.ಇ ಅನುಷ್ಠಾನದ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕುಗಳ ಕಾಯ್ದೆ 2009 ಮತ್ತು ಮಕ್ಕಳ ರಕ್ಷಣ ನೀತಿ 2016 ಕಾಯ್ದೆಯ ಬಗ್ಗೆ ನಾವು ನಡೆಸುವ ಕಾರ್ಯಕ್ರಮಗಳಲ್ಲಿ ಮತ್ತು ಕಾರ್ಯಾಗಾರದಲ್ಲಿ ಕಾಯ್ದೆಗಳ ಮಾಹಿತಿಯನ್ನು ತಿಳಿಸುತ್ತೇವೆ. ಅದರೂ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಬೇಸರದ ಸಂಗತಿ. ಸರ್ಕಾರಿ ಶಾಲೆಯಲ್ಲಿ ಕಲಿಯುವಂತಹ ಮಕ್ಕಳ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಬಾಲ್ಯವಿವಾಹ ಸಂಖ್ಯೆಯು ಸಹ ಹೆಚ್ಚಾಗುತ್ತಿದೆ. ಬಾಣಂತಿಯರ ಮತ್ತು ನವಜಾತ ಶಿಶುಗಳ ಮರಣದ ಸಂಖ್ಯೆಯು ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳು ಶಿಕ್ಷಣದಲ್ಲಿ ಅಭಿವೃದ್ಧಿಯಾದಲ್ಲಿ ಮಾತ್ರ ದೇಶದ ಅಭಿವೃದ್ಧಿ ಆಗುತ್ತದೆ. ಆದ್ದರಿಂದ ಮಕ್ಕಳ ಸುಸ್ಥಿರ ಅಭಿವೃದ್ಧಿ ಬಹಳ ಮುಖ್ಯವಾದದ್ದು ಮತ್ತು ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಅನುಷ್ಠಾನವಾಗಿ ಸಭೆಗಳು ನಡೆಯಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಬಾಲ್ಯವಿವಾಹಗಳು ಅಲ್ಲಲ್ಲಿ ನಡೆಯುತ್ತಲಿವೆ. ತಪ್ಪಿತತ್ಸರ ವಿರುದ್ದ ಕಠಿಣವಾದ ಶಿಕ್ಷೆಯಾಗಬೇಕು. ಈ ಹಿನ್ನೆಲೆಯಲ್ಲಿ ಸಮಾಜ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವುಗಳು ಮಕ್ಕಳಿಗೆ ನ್ಯಾಯ ಒದಗಿಸಬೇಕು. ಶಾಲೆಗಳಲ್ಲಿ ಕನಿಷ್ಠ ಶೌಚಾಲಯಗಳಿಲ್ಲ. ಅಂತಹ ಸರ್ಕಾರಿ ಶಾಲೆಗಳ ಮುಖ್ಯಸ್ಥರು ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ಸರ್ಕಾರಿ ಶಾಲೆಗಳ ಕೊಠಡಿ ಸೋರುತ್ತಿದ್ದರೆ ಮಾಹಿತಿ ನೀಡಬೇಕು. ನಾವು ಜಿಲ್ಲಾಡಳಿತದಿಂದ ಅನುದಾನ ಒದಗಿಸುತ್ತೇವೆ ಎಂದರು.ಕೊಪ್ಪಳ ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಲೀಂ ಪಾಷಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಣ್ಣ ಲಾಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ ರಾಮಚಂದ್ರಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುದೀಪ್ ಕುಮಾರ್ ಉಂಕಿ ಮತ್ತಿತರರಿದ್ದರು. ಚಿದಾನಂದ ನಿರ್ವಹಿಸಿದರು.