ರಾಮನಗರ: ರೈತರು ಬೆಳೆಯುವ ಬೆಳೆಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡಿ ಉತ್ತಮ ಮಾರುಕಟ್ಟೆ ಸಂಪರ್ಕ ವ್ಯವಸ್ಥೆ ಕಲ್ಪಿಸಿದ್ದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭಿಸಲಿದ್ದು, ರೈತರು ಕೂಡ ಸುಸ್ಥಿರ ಆದಾಯ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಅಂಬಿಕಾ ಅಭಿಪ್ರಾಯಪಟ್ಟರು

ರಾಮನಗರ: ರೈತರು ಬೆಳೆಯುವ ಬೆಳೆಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡಿ ಉತ್ತಮ ಮಾರುಕಟ್ಟೆ ಸಂಪರ್ಕ ವ್ಯವಸ್ಥೆ ಕಲ್ಪಿಸಿದ್ದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭಿಸಲಿದ್ದು, ರೈತರು ಕೂಡ ಸುಸ್ಥಿರ ಆದಾಯ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಅಂಬಿಕಾ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ವತಿಯಿಂದ ವಿವಿಧ ಅಭಿವೃದ್ಧಿ ಇಲಾಖಾ ಯೋಜನೆಗಳ ಕುರಿತು ಕೃಷಿ ಉದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಆಯೋಜಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಉತ್ಪಾದಿಸುವ ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ, ಮೌಲ್ಯವರ್ಧನೆ ಮಾಡಿದಾಗ ರೈತರಿಗೆ ಹಾಗೂ ರೈತ ಕಾರ್ಮಿಕರಿಗೆ ಹಲವಾರು ರೀತಿಯ ಉದ್ಯೋಗಗಳು ದೊರೆಯಲಿವೆ. ರೈತರು ಪರಿವರ್ತಕರಾಗಲು ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕು. ಉತ್ಪಾದನಾ ವೆಚ್ಚ ಕಡಿತಗೊಳಿಸಬೇಕು ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಕೃಷಿ ಪರಿಕರಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಪ್ರಮುಖವಾಗಿ ಹೈನುಗಾರಿಕೆ ಮುಂಚೂಣಿಯಲ್ಲಿದೆ, ರೈತರು ಹೈನುಗಾರಿಕೆಗೆ, ತೋಟಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಉತ್ಪನ್ನಗಳಿಗೆ ಪ್ರಾಮುಖ್ಯತೆ ನೀಡಲು ಈ ಕಾರ್ಯಗಾರವನ್ನು ಆಯೋಜಿಸಲಾಗಿದೆ. ರೈತರು ತಾಂತ್ರಿಕ ಮಾಹಿತಿ ಪಡೆದುಕೊಳ್ಳಲು ಈ ಕಾರ್ಯಗಾರ ಸಹಕಾರಿಯಾಗಿದೆ ಎಂದು ಅಂಬಿಕಾ ಹೇಳಿದರು.

ವಿಜ್ಞಾನಿಗಳಾದ ಡಾ. ಬಿ.ಬಿ. ಬೋರ್ಸೆ ಮಾತನಾಡಿ, ತೆಂಗು ಹಾಗೂ ಮಾವು ಬೆಳೆಗಳಿಂದ ಉತ್ಪಾದಿಸುವ ಉತ್ಪನ್ನಗಳ ಕುರಿತು, ಕೃಷಿ ಸಲಕರಣೆಗಳು ಹಾಗೂ ನವೀನ ತಂತ್ರಜ್ಞಾನಗಳು, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನಾ ಹಾಗೂ ರೇಷ್ಮೆ ಇಲಾಖೆಗಳಲ್ಲಿ ರೈತರಿಗೆ ದೊರಕುವ ಸೌಲಭ್ಯಗಳ ಕುರಿತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಮಂಜುನಾಥ್, ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಚಂದ್ರಯ್ಯ, ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಅಸಾದುಲ್ಲಾ ಶರೀಪ್, ಹಿರಿಯ ರೈತ ಮುಖಂಡರಾದ ಪುಟ್ಟಸ್ವಾಮಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಮೋಹನ್, ರೇಷ್ಮೆ ವಿಜ್ಞಾನಿಗಳಾದ ಡಾ. ಚಲುವಾಚಾರಿ, ಕೆಪೆಕ್‌ನ ಸಂಪನ್ಮೂಲ ವ್ಯಕ್ತಿ ಪನ್ನಗ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

30ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಉದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಆಯೋಜಿಸಲಾಗಿದ್ದ ಕಾರ್ಯಗಾರದಲ್ಲಿ ಅತಿಥಿಗಳು ಪಾಲ್ಗೊಂಡಿರುವುದು.