ಜ್ಞಾನಾಧಾರಿತ ಕೃಷಿಯಿಂದ ಸುಸ್ಥಿರ ಬದುಕು ಸಾಧ್ಯ

| Published : Nov 01 2024, 01:17 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಓಡುತ್ತಿರುವ ಜಗತ್ತಿನೊಂದಿಗೆ ಹೆಜ್ಜೆ ಹಾಕುವ ಅನಿವಾರ್ಯತೆಯಲ್ಲಿರುವ ಕೃಷಿ ಕ್ಷೇತ್ರಕ್ಕೆ ಜ್ಞಾನ ಆಧರಿತ ಕೃಷಿ ಅನುಸರಿಸಿದಲ್ಲಿ ರೈತರು ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ತಿಡಗುಂದಿ ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಸಂಗನಬಸವ ಗೊಳ್ಳಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಓಡುತ್ತಿರುವ ಜಗತ್ತಿನೊಂದಿಗೆ ಹೆಜ್ಜೆ ಹಾಕುವ ಅನಿವಾರ್ಯತೆಯಲ್ಲಿರುವ ಕೃಷಿ ಕ್ಷೇತ್ರಕ್ಕೆ ಜ್ಞಾನ ಆಧರಿತ ಕೃಷಿ ಅನುಸರಿಸಿದಲ್ಲಿ ರೈತರು ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ತಿಡಗುಂದಿ ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಸಂಗನಬಸವ ಗೊಳ್ಳಗಿ ಹೇಳಿದರು.ತಾಲೂಕಿನ ಹಿರೇಮುರಾಳ ಗ್ರಾಮದ ಶ್ರೀ ನೀಲಕಂಠೇಶ್ವರ ಸಭಾ ಭವನದಲ್ಲಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ, ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ, ತಿಡಗುಂದಿ, ಶ್ರೀ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸಿಂದಗಿ, ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಬಸರಕೋಡ, ಕಾಯಕಯೋಗಿ ರೈತ ಆಸಕ್ತ ಸ್ವ ಸಹಾಯ ಸಂಘ ಹಿರೇಮುರಾಳ ಮತ್ತು ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಿಯಮಿತಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕೋಳಿ ಸಾಕಾಣಿಕೆ, ತೋಟಗಾರಿಕೆ ಹಾಗೂ ಕೃಷಿ ಸುಸ್ಥಿರತೆಗೆ ನೂತನ ತಾಂತ್ರಿಕತೆಗಳು ಎಂಬ ಕುರಿತಾದ ನಾಲತವಾಡ ಹೋಬಳಿ ಮಟ್ಟದ ರೈತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಅರಿವಿನ ಕೊರತೆಯಿಂದ ನಷ್ಟದಲ್ಲಿರುವ ಕೃಷಿ ಕ್ಷೇತ್ರದ ಪುನಶ್ಚೇತನಕ್ಕೆ ಹೊಸ ಆಯಾಮ ಕಲ್ಪಿಸುವ ನಿಟ್ಟಿನಲ್ಲಿ ಆಂದೋಲನ ನಡೆಸುತ್ತಿರುವ ಅರವಿಂದ ಕೊಪ್ಪ ಅವರ ಪ್ರಯತ್ನ ರೈತರಿಗೆ ಕೃಷಿ ತಾಂತ್ರಿಕ ಜ್ಞಾನ ಒದಗಿಸಲು ಸಾಧ್ಯವಾಗಿದೆ ಎಂದರು.

ಉತ್ಪಾದಕ ಕಂಪನಿಯ ಅಧ್ಯಕ್ಷ ಅರವಿಂದ ಕೊಪ್ಪ ಮಾತನಾಡಿ, ಕೃಷಿಯಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಬಳಕೆ ಇಡೀ ಜೀವಸಂಕುಲವನ್ನೇ ಅಳಿವಿನಂಚಿಗೆ ತಂದು ನಿಲ್ಲಿಸಬಹುದು. ಇದನ್ನು ತಡೆದು ಮುಂದಿನ ಪೀಳಿಗೆಗೆ ಸುಂದರ ಬದುಕು ಕಟ್ಟಿಕೊಡುವ ಉಮೇದಿನಿಂದ ರೈತಾಪಿ ವರ್ಗ ಪರಿಸರಾತ್ಮಕ ಕೃಷಿಯ ಕಲ್ಪನೆಯಡಿ ಸಮಗ್ರ ಬೇಸಾಯ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಸನಗೌಡ ಪಾಟೀಲ, ನಾಲತವಾಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಶೋಕ ಕಾಂಬಳೆ, ಪಶು ವೈದ್ಯಾಧಿಕಾರಿ ಡಾ.ಬಸವರಾಜ ಚಿತ್ತರಗಿ, ಕ್ರಶಕ್ ಬಯೋಟೆಕ್ ಮಾರಾಟ ವ್ಯವಸ್ಥಾಪಕ ಶ್ರೀಶೈಲ ಬಿರಾದಾರ ಕೃಷಿ ತಾಂತ್ರಿಕತೆಗಳು, ಸರ್ಕಾರಿ ಯೋಜನೆಗಳು ಮತ್ತು ನಿರ್ವಹಣಾ ಪದ್ಧತಿಗಳ ಮೇಲೆ ವಿಷಯ ಮಂಡಿಸಿ ಸಂವಾದ ನಡೆಸಿಕೊಟ್ಟರು.

ವೇದಿಕೆಯ ಮೇಲೆ ವೇ.ಪಣಯ್ಯ ಮಠ, ಚಂದ್ರು ರಾಮೋಡಗಿ, ಪ್ರಸನ್ನಕುಮಾರ ಜಹಗೀರದಾರ, ಶೇಖರಪ್ಪಗೌಡ ಬಿರಾದಾರ, ಸಾವಿತ್ರಿ ವಗ್ಗರ, ಷಣ್ಮುಕಪ್ಪಗೌಡ ಬಿರಾದಾರ, ಕಲ್ಲಣ್ಣ ಪ್ಯಾಟಿ, ಸೋಮಲಿಂಗಪ್ಪ ಪ್ಯಾಟಿ, ಗೋಲಪ್ಪ ಗಂಗನಗೌಡ್ರ, ಬಸವರಾಜ ಕುಂಟೋಜಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿಪರ ರೈತ ಅಲ್ಲೀಸಾಬ ಸುರಪೂರ ಸ್ವಾಗತಿಸಿದರು, ಯುವ ರೈತ ಅಯ್ಯಪ್ಪ ತಂಗಡಗಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಬಿ.ಎಸ್.ಸಜ್ಜನ ನಿರೂಪಿಸಿದರು. ರುದ್ರು ರಾಮೋಡಗಿ ವಂದಿಸಿದರು.