ಅನಧಿಕೃತ ಬೀದಿಬದಿ ವ್ಯಾಪಾರ ವಿರುದ್ಧ ನಿರಂತರ ಕಾರ್ಯಾಚರಣೆ: ಮೇಯರ್‌

| Published : Aug 06 2024, 12:37 AM IST

ಅನಧಿಕೃತ ಬೀದಿಬದಿ ವ್ಯಾಪಾರ ವಿರುದ್ಧ ನಿರಂತರ ಕಾರ್ಯಾಚರಣೆ: ಮೇಯರ್‌
Share this Article
  • FB
  • TW
  • Linkdin
  • Email

ಸಾರಾಂಶ

ಷರತ್ತು ಒಪ್ಪಿ ವ್ಯಾಪಾರ ನಡೆಸುವವರಿಗೆ ಗುರುತಿನ ಚೀಟಿ ನೀಡಲು ಪಾಲಿಕೆ ಬದ್ಧವಾಗಿದೆ. ಹಾಗಾಗಿ ವ್ಯಾಪಾರಸ್ಥರ ಸಮಿತಿಯ ಪದಾಧಿಕಾರಿಗಳು ಮುಕ್ತವಾಗಿ ಚರ್ಚಿಸಿ ಬಡ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸಲು ಅವಕಾಶ ನೀಡಬೇಕು ಎಂದು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕಳೆದ ಏಳೆಂಟು ತಿಂಗಳಿನಿಂದೀಚೆಗೆ ಫೋನ್‌ ಇನ್‌ ಕಾರ್ಯಕ್ರಮ, ಪಾಲಿಕೆ ಸಾಮಾನ್ಯ ಸಭೆಗಳಲ್ಲೂ ಸದಸ್ಯರಿಂದ ಅನಧಿಕೃತ ಗೂಡಂಗಡಿ, ಬೀದಿಬದಿ ವ್ಯಾಪಾರಿಗಳಿಂದ ಆಗುತ್ತಿರುವ ತೊಂದರೆಯ ಬಗ್ಗೆ ಚರ್ಚೆಯಾಗಿರುವ ಹಿನ್ನೆಲೆಯಲ್ಲಿ ಜು.29 ರಿಂದ ಟೈಗರ್‌ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಬಗ್ಗೆ ಸಾಕಷ್ಟು ಆಕ್ಷೇಪ, ಟೀಕೆ, ಪ್ರತಿರೋಧ ವ್ಯಕ್ತವಾಗಿದೆ. ಆದರೂ ಮಂಗಳೂರು ನಾಗರಿಕರ ಹಿತದೃಷ್ಟಿಯಿಂದ ನಿರಂತರ ಟೈಗರ್‌ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೈಗರ್‌ ಕಾರ್ಯಾಚರಣೆ ಆರಂಭದ ಕೆಲವು ದಿನಗಳ ಮೊದಲು ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ನನ್ನ ಆಪ್ತ ಕಾರ್ಯದರ್ಶಿ ಮೂಲಕ ಮನವಿ ನೀಡಿದ್ದಾರೆ. ಬಳಿಕ ನನ್ನನ್ನು ಯಾರೂ ಭೇಟಿ ಮಾಡಿಲ್ಲ. ಷರತ್ತು ಒಪ್ಪಿ ವ್ಯಾಪಾರ ನಡೆಸುವವರಿಗೆ ಗುರುತಿನ ಚೀಟಿ ನೀಡಲು ಪಾಲಿಕೆ ಬದ್ಧವಾಗಿದೆ. ಹಾಗಾಗಿ ವ್ಯಾಪಾರಸ್ಥರ ಸಮಿತಿಯ ಪದಾಧಿಕಾರಿಗಳು ಮುಕ್ತವಾಗಿ ಚರ್ಚಿಸಿ ಬಡ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸಲು ಅವಕಾಶ ನೀಡಬೇಕು ಎಂದರು.

ನಗರದಲ್ಲಿ ಹೊಟೇಲ್‌ಗಳಿಗೆ ವಾಣಿಜ್ಯ ಪರವಾನಗಿ ಮಾತ್ರವೇ ಪಾಲಿಕೆ ನೀಡುತ್ತದೆ. ಉಳಿದಂತೆ ಆಹಾರ ಸುರಕ್ಷತೆಯನ್ನು ಸಂಬಂಧಪಟ್ಟ ಇಲಾಖೆಯವರು ಪರಿಶೀಲನೆ, ದಂಡ ವಿಧಿಸುವ ಕಾರ್ಯ ನಡೆಸಬೇಕು ಎಂದರು.

10 ಮಂದಿಗೆ ಮಾತ್ರ ಗುರುತು ಚೀಟಿ:

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಕೇವಲ 10 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಮಾತ್ರವೇ ಗುರುತಿನ ಚೀಟಿ ನೀಡಲಾಗಿದೆ. ಪಾಲಿಕೆಯ 18 ಷರತ್ತುಗಳನ್ನು ಒಪ್ಪಿ ಅಫಿದಾವಿತ್‌ ಸಲ್ಲಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಉಳಿದ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸಾಧ್ಯವಾಗಿಲ್ಲ ಎಂದು ಸುಧೀರ್‌ ಶೆಟ್ಟಿ ಸ್ಪಷ್ಟಪಡಿಸಿದರು.

ಗುರುತಿನ ಚೀಟಿ ನೀಡಿ ಬೀದಿಬದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಬೀದಿಬದಿ ವ್ಯಾಪಾರಸ್ಥರ ಸಂಘಟನೆಯ ಪ್ರತಿನಿಧಿಗಳ ಆರೋಪ ನಿರಾಧಾರ ಎಂದರು.ಬೀದಿಬದಿ ವ್ಯಾಪಾರವೆಂದರೆ ಕುಳಿತುಕೊಂಡು, ತಳ್ಳುಗಾಡಿ ಅಥವಾ ತಲೆಯಲ್ಲಿ ಹೊತ್ತು ವ್ಯಾಪಾರ ಮಾಡುವುದಾಗಿದೆ. ಅದಕ್ಕಾಗಿ ನಗರದಲ್ಲಿ 10 ಕಡೆಗಳಲ್ಲಿ ವ್ಯಾಪಾರ ವಲಯಗಳನ್ನು ಗುರುತಿಸಿ ನಗರ ಯೋಜನಾ ಸಮಿತಿಯಲ್ಲಿ ನಿರ್ಧರಿಸಿ ಪರಿಶೀಲನೆ ಮಾಡಿ ಕ್ರಮ ವಹಿಸಲಾಗುವುದು. ನಗರದ ಎರಡು ಪ್ರಮುಖ ರಸ್ತೆಗಳನ್ನು ಗುರುತಿಸಿ ಟೆಂಡರ್‌ ಮೂಲಕ ‘ಫುಡ್‌ ಸ್ಟ್ರೀಟ್‌’ ವ್ಯವಸ್ಥೆ ಕಲ್ಪಿಸಲು ಕೂಡಾ ಪಾಲಿಕೆ ಮುಂದಾಗಿದೆ ಎಂದು ಮೇಯರ್‌ ತಿಳಿಸಿದರು.ಉಪ ಮೇಯರ್‌ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್‌ ಕುಮಾರ್‌, ಲೋಹಿತ್‌ ಅಮೀನ್‌ ಇದ್ದರು.

.................ಬೀದಿಬದಿ ವ್ಯಾಪಾರ ಸ್ಥಳದಲ್ಲಿ ಜಿರಳೆ, ಹೆಗ್ಗಣ, ಅಮಲು ಪದಾರ್ಥ..!

ಕಾರ್ಯಾಚರಣೆ ವೇಳೆ ಬಹುತೇಕ ಆಹಾರ ಪೂರೈಕೆಯ ಗೂಡಂಗಡಿಗಳು ಸೇರಿದಂತೆ ಬೀದಿ ಬದಿ ವ್ಯಾಪಾರದ ಸ್ಥಳಗಳಲ್ಲಿ ಸ್ವಚ್ಛತೆಯ ಕೊರತೆ, ಜಿರಳೆ, ರಾಶಿ ಹೆಗ್ಗಣಗಳ ರಾಶಿ ಕಂಡು ಬಂದಿದೆ. ಕೆಲವು ಗೂಡಂಗಡಿಗಳಲ್ಲಿ ಶರಾಬು ಮಾರಾಟ, ಆಹಾರ ಪದಾರ್ಥಗಳಿಗೆ ಅಜಿನೊಮೋಟೋ ಮೊದಲಾದ ಪದಾರ್ಥಗಳನ್ನು ಉಪಯೋಗಿಸುತ್ತಿರುವುದು ಕಂಡುಬಂದಿದೆ. ನಗರದಲ್ಲಿ ಈಗಾಗಲೇ ಡೆಂಘೀ, ಮಲೇರಿಯಾದ ಹಿನ್ನೆಲೆಯಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಪಾದಾಚಾರಿಗಳಿಗೆ ಅನಧಿಕೃತ ಗೂಡಂಗಡಿ, ಬೀದಿ ಬದಿ ವ್ಯಾಪಾರಿಗಳಿಂದ ತೊಂದರೆಯಾಗುತ್ತಿರುವುದರಿಂದ ಟೈಗರ್‌ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಮೇಯರ್‌ ಹೇಳಿದರು.