ಅಧ್ಯಯನದಲ್ಲಿ ನೈತಿಕತೆ ಉಳಿಸಿಕೊಳ್ಳಿ:ಪ್ರೊ.ಎನ್.ಕೆ. ಲೋಕನಾಥ್

| Published : Jun 26 2024, 12:32 AM IST

ಸಾರಾಂಶ

ಸಂಶೋಧನಾ ವಿದ್ಯಾರ್ಥಿಗಳು ಹೊಸ ವಸ್ತು ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಇಂದು ಸಂಶೋಧನೆ ನಕಲು ಮಾಡುವುದನ್ನು ತಡೆಯಲು ತಂತ್ರಜ್ಞಾನ ಇದೆ. ಹೀಗಾಗಿ, ಸಂಶೋಧಕರು ಅಧ್ಯಯನದಲ್ಲಿ ನೈತಿಕತೆ ಉಳಿಸಿಕೊಳ್ಳಿ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಸಲಹೆ ನೀಡಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಹೊಸತಾಗಿ ಆಯ್ಕೆಯಾದ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿರುವ ಸಂಶೋಧನೆ ಮತ್ತು ಪ್ರಕಟಣಾ ನೀತಿಶಾಸ್ತ್ರ ಕುರಿತ ಆರು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಸಂಶೋಧನಾ ವಿದ್ಯಾರ್ಥಿಗಳು ಹೊಸ ವಸ್ತು ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು. ಗುಣಮಟ್ಟದ ಸಂಶೋಧನೆಗೆ ಆದ್ಯತೆ ನೀಡಬೇಕು. ಹೊಸತನದ ಕಲಿಕೆಗೆ ಅವಕಾಶ ನೀಡಿ. ನಾವು ನೀಡಿದ ಅಂಕಿ ಅಂಶ ಸರಿ ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ ಎಂದರು.

ದೇಶದ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತಿದ್ದರೂ ಗುಣಮಟ್ಟದ ಕೊರತೆ ಇದೆ. ಅಮೆರಿಕಾದಲ್ಲಿ ಪ್ರಕಟವಾಗುವ ಸಂಶೋಧನಾ ಪ್ರಬಂಧಗಳಲ್ಲಿ ಶೇ.86 ರಷ್ಟು ಪ್ರಬಂಧಗಳು ಗುಣಮಟ್ಟದಿಂದ ಕೂಡಿದ್ದರೆ, ಭಾರತದಲ್ಲಿ ಈ ಪ್ರಮಾಣ ಕೇವಲ ಶೇ.14 ರಷ್ಟಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪಿಎಚ್.ಡಿ ಪಡೆಯಲು 3 ರಿಂದ 7 ವರ್ಷದವರೆಗೆ ಕಾಲಾವಕಾಶ ಇದೆ. ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡ ಸಮಯದಲ್ಲೇ ವೇಳಾಪಟ್ಟಿ ನಿಗದಿಪಡಿಸಿಕೊಳ್ಳಬೇಕು. ಕಠಿಣ ಪರಿಶ್ರಮ, ಪ್ರಾಮಾಣಿಕತೆ ಇದ್ದರೆ 3 ವರ್ಷದಲ್ಲೇ ಸಂಶೋಧನೆ ಮುಗಿಸಬಹುದು. ಸಮಾಜ ವಿಜ್ಞಾನ ವಿಷಯದಲ್ಲಿ ಬಹುತೇಕ ಒಂದೇ ತರನಾದ ಸಂಶೋಧನೆಗಳು ಬರುತ್ತಿವೆ. ಹೊಸ ವಿಷಯಗಳ ಆಯ್ಕೆ ಮಾಡಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.

ರಾಜ್ಯ ಮುಕ್ತ ವಿವಿ ಶೈಕ್ಷಣಿಕ ಡೀನ್ ಪ್ರೊ.ಎನ್. ಲಕ್ಷ್ಮಿ ಮಾತನಾಡಿ, ಸಂಶೋಧನೆಗಳು ವಸ್ತುನಿಷ್ಠ ಆಗಿರಬೇಕು. ಕೃತಿಚೌರ್ಯ ಮಾಡಬಾರದು. ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ವಿವಿಯಲ್ಲಿ ಏಕಕಾಲಕ್ಕೆ ಎರಡು ಪದವಿ ಕಲಿಕೆಗೆ ಅವಕಾಶ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಡೀನ್ ಪ್ರೊ. ರಾಮನಾಥಂ ನಾಯ್ಡು, ಪಿಎಚ್.ಡಿ ಘಟಕದ ವಿಶೇಷ ಅಧಿಕಾರಿ ಡಾ.ಟಿ.ಎಸ್. ಹರ್ಷ, ಸಂಯೋಜನಾಧಿಕಾರಿ ಡಾ.ವಿ. ಮಹೇಶ ಇದ್ದರು.