ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವವಾದಿ. ಬಡವರು, ದಲಿತರು, ಮಹಿಳೆಯರು ಸೇರಿದಂತೆ ಎಲ್ಲ ಧರ್ಮೀಯರನ್ನು ಒಂದೇ ಎಂಬ ಭಾವನೆಯಿಂದ ಕಾಣುತ್ತಾರೆ. ಅನ್ನಭಾಗ್ಯ ಸೇರಿದಂತೆ ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ದೊಡ್ಡ ಕ್ರಾಂತಿಕಾರಿಕ ಕಾರ್ಯ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವ ಆಚರಿಸುವ ಮೂಲಕ ಜಾತಿ, ಮತಗಳನ್ನು ಮೀರಿ ಎಲ್ಲಾ ಸಮುದಾಯದವರನ್ನು ಒಂದು ಕಡೆ ಸೇರಿಸಿ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುವ ಕೆಲಸ ಮಾಡುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಶ್ಲಾಘಿಸಿದರು.ಪಟ್ಟಣದಲ್ಲಿ ಆಯೋಜಿಸಿದ್ದ ಸುತ್ತೂರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವರು, 10ನೇ ಶತಮಾನದಲ್ಲಿಯೇ ಸಮಾಜದಲ್ಲಿ ಸಾಕಷ್ಟು ಕ್ರಾಂತಿಕಾರಿ ಬದಲಾವಣೆ ತಂದಿದ್ದ ಶಿವರಾತ್ರೀಶ್ವರ ಶಿವಯೋಗಿಯವರ ಸೇವೆ ಇಂದಿನ ಎಲ್ಲ ಮಠಗಳಿಗೂ ಮಾದರಿಯಾಗಿದೆ ಎಂದರು.
ಶಿವಯೋಗಿಗಳು ನಾಡಿನ ಜನರನ್ನು ಒಗ್ಗೂಡಿಸಿ ಸೋದರತ್ವ ಬೆಳೆಸಿದ್ದರು. ಮನುಷ್ಯ ಹುಟ್ಟಿದ ಮೇಲೆ ಧರ್ಮ, ಧರ್ಮವನ್ನು ಸರಿಯಾಗಿ ಅರ್ಥೈಹಿಸಿ ನಾವೆಲ್ಲರೂ ಒಂದೇ ರೀತಿ ಅನ್ನೋ ಮನೋಭಾವ ಮೂಡಿಸಿರುವುದೇ ಗುರಿಯಾಗಿಸಿಕೊಂಡು ಮಠ ಬಂದಿದೆ ಎಂದರು.ಶ್ರೀಮಠಕ್ಕೆ ಎಲ್ಲಾ ಪಕ್ಷ, ಎಲ್ಲ ಧರ್ಮೀಯರು ಬರುತ್ತಾರೆ. ಪ್ರಜಾಪ್ರಭುತ್ವ ನಡವಳಿಕೆ ಬಗ್ಗೆ ನಂಬಿಕೆ ಇದೆ. ಸುತ್ತೂರು ಶ್ರೀಗಳು ಯಾರ ಪರ ಅಥವಾ ವಿರುದ್ದವಾಗಿ ಮಾತನಾಡಿಲ್ಲ. ಬಸವಣ್ಣರವರು ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳಲಿಲ್ಲ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಬಾಲ್ಯದಲ್ಲೇ ನೋವು ಅನುಭವಿಸಿದ್ದರೂ ಯಾರ ಬಗ್ಗೆಯೂ ದ್ವೇಷ ಮಾಡಿಲಿಲ್ಲ. ಜಯಂತ್ಯುತ್ಸವದಲ್ಲಿ ಎಲ್ಲಾ ಧರ್ಮೀಯರು ಸೇರಿರುವುದೇ ಒಗ್ಗೂಡಿಕೆಯಾಗಿದೆ. ಸುತ್ತೂರು ಶ್ರೀ ಮಠ ಮಹತ್ತರ ಕಾರ್ಯ ಯಶಸ್ವಿಯಾಗಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವವಾದಿ. ಬಡವರು, ದಲಿತರು, ಮಹಿಳೆಯರು ಸೇರಿದಂತೆ ಎಲ್ಲ ಧರ್ಮೀಯರನ್ನು ಒಂದೇ ಎಂಬ ಭಾವನೆಯಿಂದ ಕಾಣುತ್ತಾರೆ. ಅನ್ನಭಾಗ್ಯ ಸೇರಿದಂತೆ ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ದೊಡ್ಡ ಕ್ರಾಂತಿಕಾರಿಕ ಕಾರ್ಯ ಮಾಡಿದ್ದಾರೆ ಎಂದರು.
ಸಮಾರಂಭದಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸ್ವಾಗತಿಸಿದರು. ಕನಕಪುರ ದೇಗುಲ ಮಠದ ಮುಮ್ಮುಡಿ ನಿರ್ವಾಣ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಪ್ರಸನ್ನಾನಂದ ಪುರಿ ಸ್ವಾಮೀಜಿ, ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಕೆ.ಎಂ.ಉದಯ್, ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ವಿವೇಕಾನಂದ, ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕಿ ಮಲ್ಲಾಜಮ್ಮ, ಮೈಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ಮನ್ ಮುಲ್ ಅಧ್ಯಕ್ಷ ಶಿವಕುಮಾರ್, ನಿರ್ದೇಶಕ ಡಿ.ಕೃಷ್ಣೇಗೌಡ, ಮುಖಂಡರಾದ ವಿಜಯಲಕ್ಷ್ಮಿ, ಎಂ.ಎನ್.ಸುರೇಶ್ ಪಾಲ್ಗೊಂಡಿದ್ದರು.