ಮಳವಳ್ಳಿ ಪಟ್ಟಣದಲ್ಲಿ ಡಿ.16ರಿಂದ ಡಿ.22ರವರೆಗೆ ನಡೆಯಲಿರುವ ಆದಿ ಜಗದ್ಗುರು ಶ್ರೀಶಿವರಾತ್ರಿ ಶಿವಯೋಗಿಗಳ 1066 ನೇ ಜಯಂತಿ ನಿಮಿತ್ತ ಸುತ್ತೂರಿನ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಭಾ ಮಂಟಪ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ವೇದಿಕೆ ನಿರ್ಮಾಣದ ನೀಲಿ ನಕ್ಷೆ ಪರಿಶೀಲನೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದಲ್ಲಿ ಡಿ.16ರಿಂದ ಡಿ.22ರವರೆಗೆ ನಡೆಯಲಿರುವ ಆದಿ ಜಗದ್ಗುರು ಶ್ರೀಶಿವರಾತ್ರಿ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವದ ಅಂಗವಾಗಿ ಗುರುವಾರ ಸುತ್ತೂರಿನ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಭಾ ಮಂಟಪ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ವೇದಿಕೆ ನಿರ್ಮಾಣದ ನೀಲಿ ನಕ್ಷೆ ಪರಿಶೀಲಿಸಿ ಹಲವು ಸೂಚನೆ ನೀಡಿದರು.ಶಾಂತಿ ಕಾಲೇಜು ಮುಂಭಾಗದ 33 ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಸ್ಥಳವನ್ನು ಅಳತೆ ಮಾಡಿಸಿ ಮುಖ್ಯದ್ವಾರ, ವೇದಿಕೆ, ಸಭಾಂಗಣ ಯಾವ ಸ್ಥಳದಲ್ಲಿ ಏನು ಬರಬೇಕೆಂಬುವುದರ ಬಗ್ಗೆ ವೇದಿಕೆ ನಿರ್ಮಾಣ ಜವಾಬ್ದಾರಿ ತೆಗೆದುಕೊಂಡಿರುವ ಮೈಸೂರಿನ ಶರೀಫ್ ಮತ್ತು ಎಂಜಿನಿಯರ್ ತಂಡದೊಂದಿಗೆ ಚರ್ಚೆ ನಡೆಸಿದರು.
ಕಾರ್ಯಕ್ರಮಕ್ಕೆ ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಸಚಿವರು, ಶಾಸಕರು ಸೇರಿದಂತೆ ವಿಶೇಷ ಗಣ್ಯ ವ್ಯಕ್ತಿಗಳು ಆಗಮಿಸುವುದರಿಂದ ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ವೇದಿಕೆ ನಿರ್ಮಾಣದ ತಂಡಕ್ಕೆ ಮಾಹಿತಿ ನೀಡಿದರು.ಜಯಂತಿ ಮಹೋತ್ಸವದ ಸಂಚಾಲಕ ಪಿ.ಎಂ.ಮಾದೇವಸ್ವಾಮಿ ಮಾತನಾಡಿ, ಸುತ್ತೂರು ಜಯಂತಿ ಮಹೋತ್ಸವದ ಅಂಗವಾಗಿ ಡಿ.16ರಿಂದ ಸುತ್ತೂರಿನಿಂದ ದೇವರ ಉತ್ಸವ ಮೂರ್ತಿ ಬಂದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ನಿರ್ಮಾಣಗೊಂಡಿರುವ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು. ಡಿ.17ರಂದು ಬೆಳಗ್ಗೆ 10.30 ಗಂಟೆಗೆ ರಾಷ್ಟ್ರಪತಿಗಳು ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಈ ವೇಳೆ ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಆಲಮಟ್ಟಿಶ್ರೀ, ಜೆಎಸ್ ಎಸ್ ವಿದ್ಯಾ ಪೀಠದ ಕಾರ್ಯದರ್ಶಿ ಎಸ್. ಮಂಜುನಾಥ ಸ್ವಾಮಿಜಿ, ಆಂಗ್ರಾಪುರ ಸ್ವಾಮೀಜಿಗಳು, ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು, ವಿದ್ಯಾಪೀಠದ ಅಧಿಕಾರಿಗಳು, ತಾಲೂಕಿನ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.