ವಿ. ಶ್ರೀನಿವಾಸಪ್ರಸಾದ್‌ ವ್ಯಕ್ತಿತ್ವ ಸಮಾಜಕ್ಕೆ ಆದರ್ಶಪ್ರಾಯ

| Published : Aug 07 2025, 12:45 AM IST

ವಿ. ಶ್ರೀನಿವಾಸಪ್ರಸಾದ್‌ ವ್ಯಕ್ತಿತ್ವ ಸಮಾಜಕ್ಕೆ ಆದರ್ಶಪ್ರಾಯ
Share this Article
  • FB
  • TW
  • Linkdin
  • Email

ಸಾರಾಂಶ

ತಾವು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಳ್ಳುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು

ಕನ್ನಡಪ್ರಭ ವಾರ್ತೆ ನಂಜನಗೂಡುಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ತಾವಾಗಿಯೇ ರಾಜಕೀಯಕ್ಕೆ ಬಂದವರಲ್ಲ, ವಿದ್ಯಾರ್ಥಿ ದೆಸೆಯಲ್ಲಿ ಅವರು ಹೊಂದಿದ್ದ ನಾಯಕತ್ವ ಸಾಮರ್ಥ್ಯವನ್ನು ಗುರುತಿಸಿ, ರಾಜಕೀಯ ಪಕ್ಷಗಳವರು ಕರೆ ತಂದು ಚುನಾವಣೆಗೆ ನಿಲ್ಲಿಸಿದ್ದರು, ರಾಜಕೀಯ ಕ್ಷೇತ್ರದಲ್ಲಿನ ಅವರ ವ್ಯಕ್ತಿತ್ವ ಸಮಾಜಕ್ಕೆ ಆದರ್ಶಪ್ರಾಯವಾದದು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಬುಧವಾರ ವಿ. ಶ್ರೀನಿವಾಸ ಪ್ರಸಾದ್ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಆಯೋಜಿಸಿದ್ದ ʼಸ್ವಾಭಿಮಾನಿ ಸಂಪದʼ ಕಾರ್ಯಕ್ರಮದಲ್ಲಿ ಮಾತನಾಡಿದರು.ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಭಾರತ ಸಂವಿಧಾನ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದ ವಿ. ಶ್ರೀನಿವಾಸಪ್ರಸಾದ್ ಚುನಾಯಿತ ಜನಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕ ತಮಗೆ ದೊರೆತ ಅಧಿಕಾರ ಬಳಸಿಕೊಂಡು ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ವಿಶೇಷವಾಗಿ ತಾವು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಳ್ಳುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು, ಇನ್ನು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ದಿಟ್ಟತನದಿಂದ ವಿರೋಧ ವ್ಯಕ್ತಪಡಿಸುವ ಮೂಲಕ ಆತ್ಮಗೌರವ ಕಾಪಾಡಿಕೊಂಡಿದ್ದರು, ತಮ್ಮ ಭಾಷಣದಲ್ಲಿ ತಮ್ಮ ಮನಸ್ಸಿನ ತುಡಿತವನ್ನು ಹೇಳಿಕೊಳ್ಳುತ್ತಿದ್ದರು ಹಾಗೂ ಸಮಾಜಕ್ಕೆ ಸಂದೇಶ ನೀಡುವಂತಹ ಹೇಳಿಕೆಗಳನ್ನು ನೀಡುತ್ತಿದ್ದ ಸೂಕ್ಷ್ಮ ಸಂವೇದನೆಯ ರಾಜಕಾರಣಿ ಎಂದು ಅವರು ಹೇಳಿದರು. ಎಂದೂ ಜಾತಿವಾದಿಯಾಗಿ ಗುರುತಿಸಿಕೊಂಡಿರಲಿಲ್ಲಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರಿಗಿದ್ದ ಬದ್ಧತೆಯನ್ನು ಇತರರಿಗೆ ಹೋಲಿಕೆ ಮಾಡಲಾಗುವುದಿಲ್ಲ. ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಜಾತಿವಾದಿಯಾಗಿ ಗುರುತಿಸಿಕೊಂಡಿರಲಿಲ್ಲ, ಅಂಬೇಡ್ಕರ್ ವಾದದ ಬಗ್ಗೆ ಅಪಾರವಾದ ನಂಬಿಕೆ ಇತ್ತು, ಅಂಬೇಡ್ಕರ್ ವಾದ ಎಲ್ಲರನ್ನೂ ಪ್ರೀತಿ ಮಾಡು ಎಂದು ಹೇಳುತ್ತದೆ, ನಾನು ಗೃಹಮಂತ್ರಿಯಾಗಿದ್ದ ವೇಳೆ ನಡೆದ ಬದನವಾಳು ಸಂಘರ್ಷವನ್ನು ವಿ. ಶ್ರೀನಿವಾಸ ಪ್ರಸಾದ್ ಅವರ ನಾಯಕತ್ವ ಮತ್ತು ಸುತ್ತೂರು ಶ್ರೀಗಳ ಮಾರ್ಗದರ್ಶನದಿಂದ ನಿಯಂತ್ರಣ ಮಾಡಲು ಸಾಧ್ಯವಾಯಿತು ಎಂದು ನೆನಪು ಮಾಡಿಕೊಂಡರು.ವಿ. ಶ್ರೀನಿವಾಸ ಪ್ರಸಾದ್ ಅವರ ಹೆಸರನ್ನು ಚಿರಸ್ಥಾಯಿಯಾಗಿರುವ ಸಲುವಾಗಿ ಮೈಸೂರಿನ ಹೆಸರಾಂತ ಶಿಕ್ಷಣ ಸಂಸ್ಥೆಗೆ ಅವರ ಹೆಸರನ್ನಿಡುವ ಮೂಲಕ ಸದಾ ಕಾಲಕ್ಕೂ ಅವರ ಹೆಸರು ಜನಮಾನಸದಲ್ಲಿ ಉಳಿಯುವಂತೆ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು. ದಲಿತ ಎಂಬ ಕಾರಣದಿಂದ ಸಿಎಂ ಪದವಿ ವಂಚಿತರಾದರುಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ವಿ. ಶ್ರೀನಿವಾಸ ಪ್ರಸಾದ್ ಅವರು ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಸಾಮರ್ಥ್ಯವಿದ್ದರೂ ಸಹ ಕೇವಲ ದಲಿತ ಎಂಬ ಕಾರಣದಿಂದ ಅವರನ್ನು ಅವಕಾಶಗಳಿಂದ ವಂಚಿಸಲಾಯಿತು. ಅವರ ಜೀವಿತಾವಧಿಯುದ್ದಕ್ಕೂ ತುಳಿತಕ್ಕೊಳಗಾದ ಜನರ ಧ್ವನಿಯಾಗಿ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಯಾವುದೇ ಪಕ್ಷಕ್ಕೆ ಹೋದರು ಕೂಡ ಅವರು ಪಕ್ಷದ ಆಸ್ತಿಯಾಗಿದ್ದರು, ಅವರಿಗೆ ಮೊದಲನೇ ವರ್ಗದ ಸ್ಥಾನಮಾನ ಹೊಂದಿದ್ದ ಅಪರೂಪದ ರಾಜಕಾರಣಿ. ಸಮಾಜದ ಎಲ್ಲ ವರ್ಗದ ಜನರ ಹಿತಾಸಕ್ತಿಗೆ ಶ್ರಮಿಸಿದ ಶ್ರೀನಿವಾಸ ಪ್ರಸಾದ್ ಅವರ ರಾಜಕೀಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಅವರ ಕುಟುಂಬಕ್ಕೆ ಹೆಚ್ಚಿನ ರಾಜಕೀಯ ಶಕ್ತಿ ಲಭ್ಯವಾಗುವಂತೆ ಪ್ರಸಾದ್ ಅವರ ಅಭಿಮಾನಿಗಳು ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.ಡಾ.ಬಿ.ಆರ್. ಅಂಬೇಡ್ಕರ್ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಶ್ರೀನಿವಾಸ ಪ್ರಸಾದ್ ಮಾತನಾಡಿ, ಜನರು ನೀಡಿದ ಬೆಂಬಲ ಹಾಗೂ ಅಭಿಮಾನದಿಂದ ವಿ. ಶ್ರೀನಿವಾಸ ಪ್ರಸಾದ್ ಓರ್ವ ಸಮರ್ಥನಾಯಕನಾಗಿ ರೂಪುಗೊಂಡರು, ಅದೇ ಮಾದರಿಯಲ್ಲಿ ಮಾಜಿ ಶಾಸಕ ಬಿ. ಹರ್ಷವರ್ಧನ್ ಅವರಿಗೆ ಬೆಂಬಲ ಹಾಗೂ ಅಭಿಮಾನವನ್ನು ತೋರುವ ಮೂಲಕ ರಾಜಕೀಯವಾಗಿ ಬೆಳೆಸಬೇಕು ಮತ್ತು ಶ್ರೀನಿವಾಸ ಪ್ರಸಾದ್ ಅವರ ಆಶಯಗಳು ಜಾರಿಗೊಳ್ಳಲು ನೆರವಾಗಬೇಕು ಎಂದು ಮನವಿ ಮಾಡಿದರು.ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ವಿ. ಶ್ರೀನಿವಾಸ ಪ್ರಸಾದ್ ಅವರು ಭೌತಿಕವಾಗಿ ಮರೆಯಾಗಿದ್ದರೂ ಅವರ ಹೋರಾಟದ ಹಾದಿ ಹಾಗೂ ಚಿಂತನೆಗಳು ಸದಾ ಕಾಲ ನಮಗೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.ಪ್ರೊ. ಕಾಳೇಗೌಡ ನಾಗವಾರ ಮಾತನಾಡಿದರು. ಮೂರು ಮಂದಿ ಪೌರ ಬಂಧುಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಸಿ. ಚಿಕ್ಕರಂಗನಾಯಕ, ಎಸ್.ಎಂ. ಕೆಂಪಣ್ಣ, ಸದಾನಂದ, ಶೈಲಾ ಬಾಲರಾಜು, ತಾಲೂಕು ಮಂಡಲ ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಮಂಡಲ ಅಧ್ಯಕ್ಷ ಸಿದ್ದರಾಜು, ತಾಪಂ ಮಾಜಿ ಸದಸ್ಯ ಬಿ.ಎಸ್. ಮಹದೇವಪ್ಪ, ತಾಪಂ ಮಾಜಿ ಸದಸ್ಯರಾದ ಬಿ.ಎಸ್. ರಾಮು, ಹುಲ್ಲಹಳ್ಳಿ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪರಶಿವಮೂರ್ತಿ, ಮುಖಂಡರಾದ ಯು.ಎನ್. ಪದ್ಮನಾಭರಾವ್, ಮಹೇಶ್, ಬಾಲಚಂದ್ರ, ಪುಟ್ಟಸ್ವಾಮಿ, ಸೋಮಣ್ಣ, ಹುರಚಂದ್ರು, ಕೃಷ್ಣಪ್ಪ, ಮಲ್ಲಿಕಾರ್ಜುನ, ಪ್ರಜ್ವಲ್ ಶಶಿ, ಅನಂತ್, ಪುಟ್ಟಸ್ವಾಮಿ, ನಗರಸಭಾ ಸದಸ್ಯ ಮಹದೇವಪ್ರಸಾದ್ ಇದ್ದರು.