ಪ್ರಸ್ತುತ ವರ್ಷದಲ್ಲಿ ಮಠದ ಉಚಿತ ಪ್ರಸಾದ ನಿಲಯದಲ್ಲಿ ನೂರು ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ₹1.5 ಕೋಟಿ ವೆಚ್ಚದಲ್ಲಿ ಸುವರ್ಣಗಿರಿ ಸಭಾ ಭವನ ನಿರ್ಮಿಸಲಾಗಿದೆ
ಕನಕಗಿರಿ: ಮುಂಬರುವ ಮಾರ್ಚಲ್ಲಿ ಸುವರ್ಣಗಿರಿ ಪಬ್ಲಿಕ್ ಶಾಲೆ ಆರಂಭಿಸಲಾಗುವುದು ಎಂದು ಸುವರ್ಣಗಿರಿ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಮುಂಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಶಾಲಾ-ಕಾಲೇಜುಗಳ ಮಕ್ಕಳ ಹಬ್ಬ ಉದ್ಘಾಟಿಸಿ ಮಾತನಾಡಿದರು.ಸತತ 44 ವರ್ಷಗಳಿಂದ ಪ್ರಾಥಮಿಕ, ಪ್ರೌಢ ಶಾಲೆಗಳ ಸ್ಥಾಪಿಸುವ ಮೂಲಕ ಶ್ರೀಮಠವು ಹಿಂದುಳಿದ, ಬಡ ಮಕ್ಕಳಿಗೆ ನೆರವಾಗಿದೆ. ಪ್ರಸ್ತುತ ವರ್ಷದಲ್ಲಿ ಮಠದ ಉಚಿತ ಪ್ರಸಾದ ನಿಲಯದಲ್ಲಿ ನೂರು ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ₹1.5 ಕೋಟಿ ವೆಚ್ಚದಲ್ಲಿ ಸುವರ್ಣಗಿರಿ ಸಭಾ ಭವನ ನಿರ್ಮಿಸಲಾಗಿದೆ. 730 ವಿದ್ಯಾರ್ಥಿಗಳು ಶಾಲಾ,ಕಾಲೇಜುಗಳಲ್ಲಿ ಓದುತ್ತಿದ್ದು, ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ರಾಜ್ಯ, ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆಯ ಮಕ್ಕಳು ಮಿಂಚಿ ಜಿಲ್ಲೆಯ ಹಾಗೂ ಶ್ರೀಮಠದ ಕೀರ್ತಿ ಬೆಳಗಿಸಿದ್ದಾರೆ. ಮಾನಸಿಕ ರೋಗಿಗಳಿಗೆ ಉಚಿತ ಔಷಧಿ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಹೀಗೆ ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮಠದ ಸಾಧನೆ ಮಹತ್ತರವಾಗಿದೆ. 2026-27ನೇ ಸಾಲಿನಿಂದ ಆರಂಭವಾಗುವ ನೂತನ ಸುವರ್ಣಗಿರಿ ಪಬ್ಲಿಕ್ ಶಾಲೆ ಆರಂಭಗೊಳ್ಳಲಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ನಂತರ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಗುಗ್ಗಳಶೆಟ್ಟರ್, ಕಾರ್ಯದರ್ಶಿ ಪ್ರಶಾಂತ ಪ್ರಭುಶೆಟ್ಟರ್, ಸದಸ್ಯರಾದ ವಾಗೇಶ್ ಹಿರೇಮಠ, ಮೃತ್ಯುಂಜಯಸ್ವಾಮಿ, ಬಸಲಿಂಗಯ್ಯಸ್ವಾಮಿ, ಸದಾನಂದ ಸಮಗಂಡಿ, ರುದ್ರಮುನಿ ಪ್ರಭುಶೆಟ್ಟರ್ ಇದ್ದರು.