ವೂಡೇ ಪಿ.ಕೃಷ್ಣಗೆ ಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿ

| Published : Nov 06 2025, 04:00 AM IST

ಸಾರಾಂಶ

ಶ್ರೀಮದ್‌ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ ಕೊಡಮಾಡುವ 2025ನೇ ಸಾಲಿನ ಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮತ್ತು ಜಾನಪದ ವಿಭೂತಿ ರಾಷ್ಟ್ರೀಯ ಪ್ರಶಸ್ತಿಗೆ ಗದಗ ಜಿಲ್ಲೆಯ ರೋಣ ತಾಲೂಕಿ ಕೊತಬಾಳ ಗ್ರಾಮದ ಜೋಗತಿ ನೃತ್ಯ ಕಲಾವಿದ ರಾಚಯ್ಯ ವೀರಭದ್ರಯ್ಯ ಮುಧೋಳ ಅವರು ಆಯ್ಕೆಯಾಗಿದ್ದಾರೆ.

ನ.16ರಂದು ಜಾನಪದ ವಿಭೂತಿ ರಾಷ್ಟ್ರೀಯ ಪ್ರಶಸ್ತಿ

ನ.17ರಂದು ಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಬೆಂಗಳೂರು

ಶ್ರೀಮದ್‌ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ ಕೊಡಮಾಡುವ 2025ನೇ ಸಾಲಿನ ಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮತ್ತು ಜಾನಪದ ವಿಭೂತಿ ರಾಷ್ಟ್ರೀಯ ಪ್ರಶಸ್ತಿಗೆ ಗದಗ ಜಿಲ್ಲೆಯ ರೋಣ ತಾಲೂಕಿ ಕೊತಬಾಳ ಗ್ರಾಮದ ಜೋಗತಿ ನೃತ್ಯ ಕಲಾವಿದ ರಾಚಯ್ಯ ವೀರಭದ್ರಯ್ಯ ಮುಧೋಳ ಅವರು ಆಯ್ಕೆಯಾಗಿದ್ದಾರೆ.

ಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿಯು 50 ಸಾವಿರ ರು.ನಗದು, ಕಂಚಿನ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ನ.17ರಂದು ಬೆಳಗ್ಗೆ 11ಕ್ಕೆ ಶ್ರೀಮಠದ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯುವ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ, ಶ್ರೀ ಜಗದ್ಗುರು ರೇಣುಕಾದಿಪಂಚಾಚಾರ್ಯ ಯುಗಮಾನೋತ್ಸವ, ಶ್ರೀ ಬಸವಾದಿ ಶಿವಶರಣರ ಮತ್ತು ಸುವರ್ಣಲಿಂಗ ಶಿವಾಚಾರ್ಯ ಸ್ವಾಮೀಜಿಗಳ 24ನೇ ಸಂಸ್ಮರಣೋತ್ಸವ ಪ್ರಯುಕ್ತ ನಡೆಯುವ ಸಮಾರಂಭದಲ್ಲಿ ಸುವರ್ಣ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನೊಣವಿನಕೆರೆಯ ಡಾ.ಕರಿವೃಷಭದೇಶಿಕೇಂದ್ರ ಶಿವಮೋಗೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಅಧ್ಯಕ್ಷತೆ ವಹಿಸುವರು. ಮಠದ ಪಟ್ಟಾಧ್ಯಕ್ಷ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ಜಾನಪದ ವಿಭೂತಿ ರಾಷ್ಟ್ರೀಯ ಪ್ರಶಸ್ತಿಯು 25 ಸಾವಿರ ನಗದು, ತಾಮ್ರದ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ಹೊಂದಿದೆ. ನ.16ರಂದು ಸಂಜೆ 6ಕ್ಕೆ ಶ್ರೀಮಠದ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯುವ ಜಾನಪದೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಎಮ್ಮಿಗನೂರಿನ ಹಂಪಿ ಸಾವಿರದೇವರ ಮಠದ ವಾಮದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು ಎಂದು ಮಠದ ಕಾರ್ಯದರ್ಶಿ ಸಿ.ಬಸವರಾಜು ತಿಳಿಸಿದ್ದಾರೆ.