17ಕ್ಕೆ ಅನುದಾನಿತ ಶಿಕ್ಷಕರಿಂದ ಸುವರ್ಣಸೌಧ ಚಲೋ

| Published : Dec 15 2024, 02:00 AM IST

17ಕ್ಕೆ ಅನುದಾನಿತ ಶಿಕ್ಷಕರಿಂದ ಸುವರ್ಣಸೌಧ ಚಲೋ
Share this Article
  • FB
  • TW
  • Linkdin
  • Email

ಸಾರಾಂಶ

೨೦೦೬ರ ಬಳಿಕ ಅನುದಾನಿತ ಶಾಲಾ ಕಾಲೇಜುಗಳಿಗೆ ಕೆಲಸಕ್ಕೆ ಸೇರಿದ ಅನುದಾನಕ್ಕೆ ಒಳಪಟ್ಟಿರುವ ನೌಕರರಿಗೆ ಕಾಂಗ್ರೆಸ್ ಪಕ್ಷವೂ ಚುನಾವಣಾ ಪೂರ್ವದಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು, ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದರೂ ಈಡೆರಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.೧೭ರಂದು ಬೆಳಗಾವಿ ಸುವರ್ಣಸೌಧ ಚಲೋ ಹಮ್ಮಿಕೊಂಡಿದ್ದು, ಪಿಂಚಣಿ ವಂಚಿತ ಎಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಮಂಜುನಾಥ್ ಮನವಿ ಮಾಡಿದ್ದಾರೆ. ನಗರದಲ್ಲಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಭೆಯಲ್ಲಿ ಮಾತನಾಡಿ, ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿರುವ ನಮಗೆ ಯಾವುದೇ ರೀತಿ ಸೇವಾ ಭದ್ರತೆಯಿಲ್ಲ, ಇದರಿಂದಾಗಿ ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳುವ ಅಗತ್ಯವಿದೆ ಎಂದರು.ನಿಶ್ಚಿತ ಪಿಂಚಣಿ ಸೌಲಭ್ಯ ಕಲ್ಪಿಸಿ

೨೦೦೬ರ ಬಳಿಕ ಅನುದಾನಿತ ಶಾಲಾ ಕಾಲೇಜುಗಳಿಗೆ ಕೆಲಸಕ್ಕೆ ಸೇರಿದ ಅನುದಾನಕ್ಕೆ ಒಳಪಟ್ಟಿರುವ ನೌಕರರಿಗೆ ಕಾಂಗ್ರೆಸ್ ಪಕ್ಷವೂ ಚುನಾವಣಾ ಪೂರ್ವದಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು, ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ, ಆದರೂ ಸಹ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಿಂಚಣಿ ಬೇಡಿಕೆ ಮತ್ತು ನಿಶ್ಚಿತ ಪಿಂಚಣಿ ಅನುಷ್ಠಾನ ಮತ್ತು ಅನುದಾನಿತ ನೌಕರರ ಸೇವಾ ನಿಯಂತ್ರಣ ಕಾಯಿದೆ ೨೦೧೪ನ್ನು ರದ್ದುಗೊಳಿಸಲು ಒತ್ತಾಯಿಸಿ ಸಂಘದ ಮೂಲಕ ದಶಕಗಳಿಂದ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಹೋರಾಟದ ಸ್ವರೂಪವನ್ನು ತೀವ್ರಗೊಳಿಸಬೇಕಾಗಿದ್ದು ಇದು ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು.

ಸಿಎಂ ಭರವಸೆ ಈಡೇರಿಸಿಲ್ಲ

ಬಿಜೆಪಿ ಸರ್ಕಾರದ ಅವಧಿಯಲ್ಲಿ ೧೪೧ ದಿನಗಳ ಕಾಲ ಫ್ರೀಡಂ ಪಾರ್ಕಿನಲ್ಲಿ ಹೋರಾಟ ನಡೆಸಿದಾಗ ಬಾದಾಮಿ ತಾಲೂಕಿನ ನಿವೃತ್ತ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಆಗ ಮೃತರ ಮನೆಗೆ ಇಂದು ಮುಖ್ಯಮಂತ್ರಿಯಾಗಿದ್ದು ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಭೇಟಿ ನೀಡಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು ಎಂದು ನೆನಪಿಸಿದರು.. ಸಭೆಯಲ್ಲಿ ಪಿಂಚಣಿ ವಂಚಿತ ನೌಕರರ ಮುಖಂಡರಾದ ಜಿ.ಎನ್.ವೇಣುಗೋಪಾಲ್, ಮುರಳಿ, ವಿಶ್ವನಾಥ್, ಈಶ್ವರಪ್ಪ, ರಘುನಾಥ್ ರೆಡ್ಡಿ, ವೆಂಕಟರಾಮಯ್ಯ, ಸುಬ್ಬಯ್ಯ ಇದ್ದರು.