ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕನ್ನಡ ವೈದ್ಯಕೀಯ ಸಾಹಿತ್ಯ ಸೃಷ್ಟಿಗೆ ಡಾ.ಎಸ್.ಪಿ. ಯೋಗಣ್ಣ ಅವರ ವೈದ್ಯಕೋಶ ಮಹತ್ತರ ಕೊಡುಗೆಯಾಗಲಿದೆ ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.ಶನಿವಾರ ಬೆಳಗ್ಗೆ ಸುಯೋಗ್ ಆಸ್ಪತ್ರೆ ಸಭಾಂಗಣದಲ್ಲಿ ತಾಯಮ್ಮ ಪ್ರಕಾಶನ ಪ್ರಕಟಿಸಿರುವ ಡಾ.ಎಸ್.ಪಿ. ಯೋಗಣ್ಣ ಅವರ ಸ್ವಾಸ್ಥ್ಯ ಸಂಪದ ಮತ್ತು ಲೈಂಗಿಕ ಸುಖದ ಸುತ್ತಮುತ್ತ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಬೆರಳೆಣಿಕೆಯಷ್ಟು ಇರುವ ಕರ್ನಾಟಕದ ವೈದ್ಯ ಸಾಹಿತಿಗಳಲ್ಲಿ ಡಾಎಸ್.ಪಿ.ಯೋಗಣ್ಣ ಅವರು ಅಗ್ರಗಣ್ಯರು. ಅವರ 30 ಸಾವಿರ ವೈದ್ಯ ತಾಂತ್ರಿಕ ಪದಗಳಿಗೆ ಕನ್ನಡ ಪದಗಳನ್ನುಳ್ಳ ವೈದ್ಯಕೀಯ ಪದಕೋಶ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡು ಶೀಘ್ರದಲ್ಲಿ ಬಿಡುಗಡೆಯಾಗಲಿದ್ದು, ವೈದ್ಯಕೀಯ ಸಾಹಿತ್ಯ ಸೃಷ್ಟಿಗೆ ಮಹತ್ವದ ಕೊಡುಗೆ ಆಗಲಿದೆ ಎಂದರು.ಡಾ. ಯೋಗಣ್ಣ ಅವರ ವೈದ್ಯಕೀಯ ಕೃತಿಗಳು ಸರಳ ಕನ್ನಡದಲ್ಲಿದ್ದು, ಜನ ಸಾಮಾನ್ಯರು ಕ್ಲಿಷ್ಟ ವೈದ್ಯಕೀಯ ವಿಚಾರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಬರೆದಿರುವುದು ಅವರ ವಿಶಿಷ್ಟ ಸಾಹಿತ್ಯ ಪ್ರತಿಭೆಗೆ ಹಿಡಿದ ಕೈಗನ್ನಡಿ ಎಂದು ಅವರು ಶ್ಲಾಘಿಸಿದರು.ಅಂಕಣ ಬರಹಗಾರರಲ್ಲಿ ಜನಪ್ರಿಯ ಅಂಕಣ ಬರಹಗಾರರು ಮತ್ತು ಸ್ಥಿರ ಅಂಕಣಬರಹಗಾರರೆಂಬ 2 ವಿಧಗಳಿದ್ದು, ಜನಪ್ರಿಯ ಅಂಕಣಕಾರರ ಬರಹಗಳು ತಾತ್ಕಾಲಿಕವಾಗಿ ಪತ್ರಿಕೆಯ ಓದುಗರ ಸಂಖ್ಯೆ ಹೆಚ್ಚಿಸುತ್ತವೆಯಾದರೂ ಅವರು ಬರವಣಿಗೆ ನಿಲ್ಲಿಸಿದ ನಂತರ ಆ ಓದುಗರ ಸಂಖ್ಯೆಯೂ ಇಳಿಮುಖವಾಗುತ್ತದೆ. ಆದರೆ, ಸ್ಥಿರ ಅಂಕಣ ಬರಹಗಾರರು ಲೇಖನ ಬರೆಯುವುದನ್ನು ನಿಲ್ಲಿಸಿದ ಅನಂತರವೂ ಆಕರ್ಷಿತರಾದ ಹೊಸ ಓದುಗರು ಮುಂದುವರೆಯುತ್ತಾರೆ ಎಂದು ಅವರು ವಿಶ್ಲೇಷಿಸಿದರು.ಡಾ. ಯೋಗಣ್ಣ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಸುಯೋಗ ವಾಣಿ ಕನ್ನಡ ಆರೋಗ್ಯ ಮಾಸಿಕವೂ ಕೂಡ ಉತ್ತಮ ವಿನ್ಯಾಸ ಮತ್ತು ಗುಣಮಟ್ಟದ ಲೇಖನವನ್ನು ಒಶಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಪತ್ರಿಕೆ ಮತ್ತಷ್ಟು ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಮಠದ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಆರೋಗ್ಯದ ಅರಿವು ಜನಸಾಮಾನ್ಯರಿಗೆ ಅತ್ಯವಶ್ಯಕವಾಗಿದ್ದು, ಡಾ.ಎಸ್.ಪಿ. ಯೋಗಣ್ಣ ಅವರ ಈ ಎರಡೂ ಕೃತಿಗಳು ಎಲ್ಲರಿಗೂ ಹೆಚ್ಚು ಉಪಯುಕ್ತವಾಗಲಿದೆ ಎಂದರು.ಪ್ರಸ್ತುತ ಯುವಸಮುದಾಯದಲ್ಲಿ ತಾಳ್ಮೆ ಮತ್ತು ಕಾರ್ಯತತ್ಪರತೆ ಕ್ಷೀಣಿಸುತ್ತಿದ್ದು, ಅರಿವನ್ನು ಮೂಡಿಸುವ ಇಂತಹ ಪುಸ್ತಕಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದರು.ಕೃತಿ ಕುರಿತು ಮಾತನಾಡಿದ ಸಾಹಿತಿ ಪ್ರೊ. ಚಂದ್ರಶೇಖರ್, ಇಂದಿನ ಹದಿಹರೆಯದವರಿಗೆ ಲೈಂಗಿಕ ಶಿಕ್ಷಣ ಅತ್ಯವಶ್ಯಕವಿದ್ದು, ಡಾ. ಯೋಗಣ್ಣ ಅವರ ಲೈಂಗಿಕ ಸುಖದ ಸುತ್ತಮುತ್ತ ಕೃತಿ ಪಠ್ಯಪುಸ್ತಕವಾಗಲು ಯೋಗ್ಯವಾಗಿದೆ ಎಂದು ಅವರು ಹೇಳಿದರು.ಹಿರಿಯ ಪತ್ರಕರ್ತ ಎಂ.ಎನ್. ಮೋಹನ್ ಕುಮಾರ್, ವಿಶ್ರಾಂತ ಕುಲಪತಿ ಡಾ. ಎನ್.ಎಸ್. ರಾಮೇಗೌಡ, ಸುಯೋಗ್ ಆಸ್ಪತ್ರೆ ಟ್ರಸ್ಟಿ ಸುಧಾ ಯೋಗಣ್ಣ, ವ್ಯವಸ್ಥಾಪಕ ನಿರ್ದೇಶಕ ಸುಯೋಗ್ ಯೋಗಣ್ಣ, ವೈದ್ಯಕೀಯ ನಿರ್ದೇಶಕ ಡಾ. ರಾಜೇಂದ್ರಪ್ರಸಾದ್, ನಿರ್ದೇಶಕಿ ಡಾ. ಸೀಮಾ ಯೋಗಣ್ಣ ಇದ್ದರು.