ವೈದ್ಯರ ಸೇವೆಗಿಂತ ಶುಶ್ರೂಷಕರ ಸೇವೆ ಮಿಗಿಲು:ಪ್ರೊ. ಶರಣಪ್ಪ

| Published : May 23 2024, 01:04 AM IST

ಸಾರಾಂಶ

ವೈದ್ಯರುಗಳು ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆಯನ್ನು ಸಲಹೆ ನೀಡಿ ಹೊರಟರೆ, ರೋಗಿಯ ಮನ ಗೆದ್ದು ಅದನ್ನು ಪರಿಪಾಲಿಸುವ ಜವಾಬ್ದಾರಿ ಶುಶ್ರೂಷಕರದಾಗಿದೆ. ಪ್ರಪಂಚದಲ್ಲಿಯೇ ಶುಶ್ರೂಷಕರ ಕೊರತೆ ಇದ್ದು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಶುಶ್ರೂಷಕ ಶಿಕ್ಷಣವನ್ನು ಪಡೆದುಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರುಶುಶ್ರೂಷಕರ ಸೇವೆಯು ವೈದ್ಯರ ಸೇವೆಗಿಂತ ಅತ್ಯುನ್ನತ ಎಂದು ಕರ್ನಾಟಕ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿದರು.ನಗರದ ಸುಯೋಗ್ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ವೈದ್ಯರುಗಳು ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆಯನ್ನು ಸಲಹೆ ನೀಡಿ ಹೊರಟರೆ, ರೋಗಿಯ ಮನ ಗೆದ್ದು ಅದನ್ನು ಪರಿಪಾಲಿಸುವ ಜವಾಬ್ದಾರಿ ಶುಶ್ರೂಷಕರದಾಗಿದೆ. ಪ್ರಪಂಚದಲ್ಲಿಯೇ ಶುಶ್ರೂಷಕರ ಕೊರತೆ ಇದ್ದು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಶುಶ್ರೂಷಕ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ರೋಬಟ್ ಇತ್ಯಾದಿ ಆಧುನಿಕ ತಂತ್ರಜ್ಞಾನ ಶರವೇಗದಲ್ಲಿ ಅಳವಡಿಕೆ ಇದ್ದು ಅಂತಹ ಎಲ್ಲಾ ತಂತ್ರಜ್ಞಾನವನ್ನು ಶುಶ್ರೂಷಕರು ಅಳವಡಿಸಿಕೊಳ್ಳಬೇಕು. ಮಾನವೀಯ ಅಂತಃಕರಣದ ಅವಶ್ಯಕತೆ ಇದ್ದು ಭಾರತೀಯ ವೈದ್ಯ ಮತ್ತು ಶುಶ್ರೂಷಕರಲ್ಲಿ ಮಾನವೀಯತೆ ಅಧಿಕವಾಗಿರುವುದರಿಂದ ಇಡೀ ಪ್ರಪಂಚದಲ್ಲಿ ಭಾರತೀಯ ಶುಶ್ರೂಷಕರಿಗೆ ಬೇಡಿಕೆ ಇದೆ ಎಂದು ಅವರು ಹೇಳಿದರು.

ಮುಕ್ತ ವಿವಿ ವಿಶ್ರಾಂತ ಕುಲಪತಿ ಡಾ.ಎನ್.ಎಸ್. ರಾಮೇಗೌಡ ಮಾತನಾಡಿ, ನರ್ಸಿಂಗ್ ಕಾಲೇಜಿನಲ್ಲಿ ಪಠ್ಯ ಪುಸ್ತಕಗಳ ಜೊತೆಗೆ ಶುಶ್ರೂಷಕರಿಗೆ ಅಗತ್ಯವಿರುವ ಮೌಲ್ಯಗಳ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ. ಆದ್ದರಿಂದ ಇಲ್ಲಿಂದ ಹೊರಬರುವ ಶುಶ್ರೂಷಕರು ಇನ್ನಿತರ ಕಾಲೇಜುಗಳಿಗಿಂತ ವಿಭಿನ್ನವಾಗಿರುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸುಯೋಗ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ಶುಶ್ರೂಷಕರ ಸೇವೆ ಅತ್ಯುನ್ನತವಾಗಿದ್ದು ಅವರಿಗೆ ಭಾರತದಲ್ಲಿ ಸಿಗುತ್ತಿರುವ ವೇತನ ಮತ್ತು ಆರ್ಥಿಕ ಸೌಲಭ್ಯ ನಗಣ್ಯ ಎಂದು ತಿಳಿಸಿದರು.

ಇಂದಿನ ಆಧುನಿಕ ಶುಶ್ರೂಷಕರಿಗೆ ಪ್ಲಾರೆನ್ಸ್ ನೈಟಿಂಗೇಲ್ ಸೇವೆ ಅನುಕರಣಿಯ. ಅವರು ಹುಟ್ಟಿದ ದಿನವನ್ನು ಅಂತರಾಷ್ಟ್ರೀಯ ಶುಶ್ರೂಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿ, ಸುಯೋಗ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕ ಅಭಿಷೇಕ್ ಅವರಿಗೆ 2024ರ ಆಸ್ಪತ್ರೆಯ ಫ್ಲ್ಯಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸುಯೋಗ್ ಸಮೂಹ ಶಿಕ್ಷಣ ಸಂಸ್ಥೆಗಳ ಸಿಇಒ ಡಾ. ರಾಜೇಂದ್ರ ಪ್ರಸಾದ್ ಶುಶ್ರೂಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಆಸ್ಪತ್ರೆಯ ಎಂಡಿ ಡಾ. ಸುಯೋಗ್ ಯೋಗಣ್ಣ, ಸುಯೋಗ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಸೀಮಾ ಯೋಗಣ್ಣ, ಪ್ರಾಂಶುಪಾಲೆ ನಾಗಮಣಿ, ಸುಯೋಗ್ ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕ ಪಿ.ಜೆ. ಅರುಣ್ ಕುಮಾರ್ ಮೊದಲಾದವರು ಇದ್ದರು.