ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಹೂವನೂರಿನಲ್ಲಿ ಜ.13 ಮತ್ತು 14 ರಂದು ಸ್ವಾಭಿಮಾನಿ ಶರಣ ಮೇಳವನ್ನು ಆಯೋಜಿಸಲಾಗಿದೆ ಎಂದು ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷರು, ಬಸವಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠಾಧ್ಯಕ್ಷ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.13 ರಂದು ಬೆಳಗ್ಗೆ 10.30 ಕ್ಕೆ ಸ್ವಾಭಿಮಾನಿ ಶರಣ ಮೇಳವನ್ನು ಚಿಕ್ಕಮಗಳೂರಿನ ಪೂಜ್ಯ ಡಾ.ಬಸವಾನಂದ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಅಂದು ಬೆಳಗ್ಗೆ 6 ಗಂಟೆಗೆ ಕೊಪ್ಪಳ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ವೀರಣ್ಣ ಲಿಂಗಾಯತ ಅಧ್ಯಕ್ಷತೆ ವಹಿಸುವರು. ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಬಸವ ಚಿಂತನ ಪ್ರಭೆ ನಡೆಯಲಿದೆ ಎಂದರು.
ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಬಸವ ಧ್ವಜಾರೋಹಣ ಮಾಡುವರು. ಸ್ವಾಭಿಮಾನಿ ಶರಣ ಮೇಳದ ಸ್ವಾಗತ ಸಮಿತಿಯ ಅಧ್ಯಕ್ಷ ಚಿಕ್ಕಮಗಳೂರಿನ ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸುವರು. ಬೀದರ ಬಸವ ಮಂಟಪದ ಸದ್ಗುರು ಮಾತೆ ಸತ್ಯಾದೇವಿ, ಬೆಳಗಾವಿಯ ಪ್ರವಚನಕಾರರಾದ ಸದ್ಗುರು ಮಾತೆ ಅಕ್ಕನಾಗಲಾಂಬಿಕೆ ಮಾತಾಜಿ ದಿವ್ಯ ಸಮ್ಮುಖ ವಹಿಸುವರು. ತೆಲಂಗಾಣದ ಲಿಂಗಾಯತ ಸಮಾಜದ ಗಣ್ಯರಾದ ವೆನ್ನಾ ಈಶ್ವರಪ್ಪ, ಸಂಗಮೇಶ್ವರ ಮತ್ತು ಮಹಾರಾಷ್ಟ್ರದ ವಿಜಯ ಹತ್ತೂರೆ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.ಅಂದು ಸಂಜೆ ರಾಷ್ಟ್ರೀಯ ಬಸವದಳದ ಯುವಗೋಷ್ಠಿ ನಡೆಯಲಿದೆ. ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯಸಂಚಾಲಕ ಶ್ರೀಕಾಂತ ಸ್ವಾಮಿ ಹಾಗೂ ಸಾಹಿತಿ ಸಚ್ಚಿದಾನಂದ ಚಟ್ನಳ್ಳಿ ಉಪನ್ಯಾಸ ನೀಡಲಿದ್ದಾರೆ. ಸಂಜೆ 5ಕ್ಕೆ ಯುವಗೋಷ್ಠಿ ಉದ್ಘಾಟನೆಯನ್ನು ರಾಷ್ಟ್ರೀಯ ಬಸವ ದಳದ ಮುಖಂಡರಾದ ಸಂಜಯ ಪಾಟೀಲ ಮಾಡಲಿದ್ದಾರೆ. ತೆಲಂಗಾಣ ಯುವ ರಾ.ಬ.ದಳದ ಅಧ್ಯಕ್ಷ ಮಧು ಇಟಗ್ಯಾಳ ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿಯ ಶ್ರೀಶೈಲ ತುಂಗಳದ ಹಾಗೂ ಸದಾಶಿವ ಹಚ್ಚಡದ ವಿಷಯ ಮಂಡನೆ ಮಾಡುವರು.
ಜ.14 ರಂದು ಲಿಂಗಾಯತ ಧರ್ಮ ಸಂಸ್ಥಾಪನಾ ದಿನದಂದು ಸಮುದಾಯ ಪ್ರಾರ್ಥನೆ, ವಚನ ಪಠಣ ನಡೆಯಲಿದೆ. ಕಲ್ಯಾಣ ಹೆಬ್ಬಾಳದ ಪೂಜ್ಯ ಬಸವ ಚೇತನ ದೇವರು, ಶಾಂತಾದೇವಿ ಮಾತಾಜಿ, ಮಲಕನಕೊಪ್ಪ ಸಮ್ಮುಖ ವಹಿಸುವರು. ಎಲ್ಲ ಪೂಜ್ಯರು ಉದ್ಘಾಟಿಸುವರು. ಯುವ ನಾಯಕ ರಾಹುಲ್ ಜಾರಕಿಹೊಳಿ ಅತಿಥಿಗಳಾಗಿ ಆಗಮಿಸಲಿದ್ದು, ಮಾಜಿ ಸಚಿವ ಮುರಗೇಶ ನಿರಾಣಿ ಅವರ ಧರ್ಮಪತ್ನಿ ಕಮಲಮ್ಮ ನಿರಾಣಿ ಅವರು ಬಸವ ಧ್ವಜಾರೋಹಣ ಮಾಡಲಿದ್ದಾರೆ. ಬೆಳಗಾವಿ ರಾ.ಬ.ದಳದ ಅಧ್ಯಕ್ಷ ಅಶೋಕ ಬೆಂಡಿಗೇರಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಕೆಎಎಸ್ ಅಧಿಕಾರಿ ಎಸ್.ದಿವಾಕರ ಹಾಗೂ ಇಂದುಮತಿ ಪಾಟೀಲ ಅನುಭಾವ ಚಿಂತನ ಮಾಡಲಿದ್ದಾರೆ.ಅಂದು ಸಂಜೆ 5 ಗಂಟೆಗೆ ಲಿಂಗಾಯತ ಧರ್ಮ ಮಾನ್ಯತೆಗಾಗಿ ಮರು ಪ್ರಸ್ತಾವನೆ ಕುರಿತು ಜನ ಜಾಗೃತಿ ಚಿಂತನಗೋಷ್ಠಿ ನಡೆಯಲಿದೆ. ಮಂಡ್ಯ ಜಿಲ್ಲೆಯ ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮಂಜುನಾಥ ಉದ್ಘಾಟಿಸುವರು. ಬೀದರ ರಾ.ಬ.ದಳದ ಅಧ್ಯಕ್ಷ ಡಾ.ಮಹೇಶ ಬಿರಾದಾರ ಧ್ವಜಾರೋಹಣ ಮಾಡುವರು. ನ್ಯಾಯವಾದಿ ಅಶೋಕ ಮಾಣೂಕೆ, ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಚಿಂತನೆ ನಡೆಸುವರು. ಮಂಡ್ಯದ ಬಸವ ಫೌಂಡೇಶನ್ ಅಧ್ಯಕ್ಷ ಅಪರ್ಣ ಎಂ.ಶಿವಕುಮಾರ ಅತಿಥಿಗಳಾಗಿ ಆಗಮಿಸುವರು.
ಇದೇ ಸಂದರ್ಭದಲ್ಲಿ ಸಾಧಕರನ್ನು ಗುರುತಿಸಿ ಶರಣ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು, ಸ್ವಾಭಿಮಾನಿ ಶರಣ ಮೇಳಕ್ಕೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಬಸವ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಭಕ್ತರಿಗೆ ಪ್ರಸಾದ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಭುಲಿಂಗ ಸ್ವಾಮೀಜಿ, ಸತ್ಯಾದೇವಿ ಮಾತಾಜಿ, ಅಕ್ಕನಾಗಲಾಂಬಿಕೆ ಮಾತಾಜಿ, ಚಂದ್ರಕಾಂತ ಲುಕ್, ಅಶೋಕ ಬೆಂಡಿಗೇರಿ ಉಪಸ್ಥಿತರಿದ್ದರು.