ಕುಶಾಲನಗರ ರೋಟರಿ ಸಂಸ್ಥೆ ಮೂಲಕ ಹಸಿ ಕಸದ ನಿರ್ವಹಣೆಗಾಗಿ ಸ್ವಚ್ಛ ಕುಶಾಲನಗರ ಅಭಿಯಾನವನ್ನು ಫೆ.1ರಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ತಿಳಿಸಿದ್ದಾರೆ.

ಕನ್ನಡಪ್ರಭವಾರ್ತೆ ಕುಶಾಲನಗರ

ಕುಶಾಲನಗರ ರೋಟರಿ ಸಂಸ್ಥೆ ಮೂಲಕ ಹಸಿ ಕಸದ ನಿರ್ವಹಣೆಗಾಗಿ ಸ್ವಚ್ಛ ಕುಶಾಲನಗರ ಅಭಿಯಾನವನ್ನು ಫೆ.1ರಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ತಿಳಿಸಿದ್ದಾರೆ. ಕುಶಾಲನಗರ ರೋಟರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕುಶಾಲನಗರ ರೋಟರಿಯ ಸುವರ್ಣ ಮಹೋತ್ಸವ ಅಂಗವಾಗಿ ಈಗಾಗಲೇ ಹಲವು ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಫೆಬ್ರವರಿ ತಿಂಗಳ ಅಂತ್ಯದಲ್ಲಿ ತನಕ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ವಿವಿಧ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಛ ಕುಶಾಲನಗರ ನಿರ್ಮಿಸುವುದು ಸುವರ್ಣ ಮಹೋತ್ಸವದ ಧ್ಯೇಯವಾಗಿದೆ ಎಂದು ಹೇಳಿದ ಅವರು ಈ ಸಂಬಂಧ ಕುಶಾಲನಗರ ಪಟ್ಟಣದಲ್ಲಿ ಒಂದು ತಿಂಗಳ ಕಾಲ ನಾಗರಿಕರಿಗೆ ಕಸ ವಿಲೇವಾರಿ ಬಗ್ಗೆ ಮಾಹಿತಿ ಅರಿವು ನೀಡುವ ಕೆಲಸ ನಡೆಯಲಿದೆ. ಇದರೊಂದಿಗೆ ನಮ್ಮ ತಂಡ ಪ್ರತಿ ಮನೆಮನೆಗೆ ತೆರಳಿ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿ ಸಹಿ ಸಂಗ್ರಹ ಯೋಜನೆ ಹಮ್ಮಿಕೊಂಡಿದೆ ಎಂದರು. ಈ ಯೋಜನೆಯ ಅನುಷ್ಠಾನದ ಸಂಬಂಧ ಕೂಡಿಗೆ ಸಮೀಪದ ಭುವನಗಿರಿ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಕಸ ವಿಂಗಡಣೆ ಘಟಕ ಸ್ಥಾಪನೆಗೆ ರೋಟರಿ ಸಂಸ್ಥೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು. ದಿನಕ್ಕೆ ಸುಮಾರು ಮೂರರಿಂದ ಐದು ಟನ್ ಪ್ರಮಾಣದ ಕಸ ವಿಂಗಡನೆ ಮಾಡುವುದು, ಹಸಿ ಕಸವನ್ನು ಜೈವಿಕ ಗೊಬ್ಬರವಾಗಿ ಪರಿವರ್ತಿಸುವುದು, ಕಸ ಸಂಗ್ರಹಣೆಗೆ 2 ಟ್ರ್ಯಾಕ್ಟರ್ ಮತ್ತು ಕಾರ್ಮಿಕರನ್ನು ಒದಗಿಸಲು ಪಟ್ಟಣ ಪಂಚಾಯಿತಿ ಸಹಯೋಗದೊಂದಿಗೆ ಕೆಲಸ ಮಾಡಲಾಗುವುದು. ವಿಶೇಷವಾಗಿ ಜಾಗೃತಿ ವಾಹನ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸಂಚರಿಸಿ ಸ್ವಚ್ಛ ಕುಶಾಲನಗರ ಕುರಿತ ಸಂದೇಶ, ಆಡಿಯೋ ಪ್ರಕಟಣೆ ಮತ್ತು ಜಾಗೃತಿ ಚಿತ್ರ ಹಾಗೂ ಫಲಕಗಳನ್ನು ಅಳವಡಿಸುವ ಕಾರ್ಯ ಮಾಡಲಿದೆ ಎಂದು ವಿವರ ನೀಡಿದರು. ಸ್ವಚ್ಛತೆ ಅಂಗವಾಗಿ ಸ್ಥಳೀಯ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಐದು ಸ್ಥಳಗಳಲ್ಲಿ ಕಸ ಸಂಗ್ರಹ ಘಟಕ

ರೋಟರಿ ಕುಶಾಲನಗರದಿಂದ ಬಾಟಲ್ ಮಾದರಿಯ ಒಣ ಕಸ ಸಂಗ್ರಹ ಘಟಕಗಳನ್ನು ಪಟ್ಟಣದ ಐದು ಸ್ಥಳಗಳಲ್ಲಿ ಸ್ಥಾಪನೆ ಮಾಡಲಾಗುವುದು. ಕುಶಾಲನಗರ -ಕೊಪ್ಪ ಕಾವೇರಿ ಸೇತುವೆ ಬಳಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಎದುರುಗಡೆ ಮಡಿಕೇರಿ ರಸ್ತೆ ಪ್ರವೇಶದ ವ್ಯಾಪ್ತಿ ಮತ್ತು ಚಿಕ್ಲಿಹೊಳೆ ಅಣೆಕಟ್ಟು ಸಮೀಪ ಸೇರಿದಂತೆ ವಿವಿಧ ಪ್ರವಾಸಿ ತಾಣದಲ್ಲಿ ಅಳವಡಿಸಲಾಗುತ್ತದೆ ಎಂದರು. ಪುರಸಭೆ ವ್ಯಾಪ್ತಿಯ ಎಲ್ಲ ಮನೆಗಳಿಗೆ ಭಿತ್ತಿ ಪತ್ರ ನೀಡುವ ಮೂಲಕ ವ್ಯಾಪಾರ ಮಳಿಗೆಗಳಲ್ಲಿ ಸ್ವಚ್ಛತಾ ಸ್ಟಿಕರ್ ಅಂಟಿಸುವುದು, ಆಯ್ದ ಸ್ಥಳಗಳಲ್ಲಿ ಗೋಡೆ ಬರಹಗಳ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ರೋಟರಿ ಮೂಲಕ ಹಸಿದವರಿಗೆ ಅನ್ನ ನೀಡುವ ಯೋಜನೆ ಈಗಾಗಲೇ ಕಳೆದ ಆರು ತಿಂಗಳಿನಿಂದ ನಡೆಯುತ್ತಿದೆ. ಪಟ್ಟಣದಲ್ಲಿ ಆಯ್ದ ಪೊಲೀಸ್ ಚೌಕಿಗಳ ನವೀಕರಣ ಮತ್ತು ಕುಶಾಲನಗರದಲ್ಲಿ ಪತ್ರಕರ್ತರ ಕಟ್ಟಡ ನವೀಕರಣಕ್ಕೆ ರೋಟರಿ ಕುಶಾಲನಗರ ಮೂಲಕ 50,000 ರು. ಆರ್ಥಿಕ ನೆರವು ನೀಡಲಾಗುವುದು ಎಂದು ಅವರು ಹೇಳಿದರು.

ಕುಶಾಲನಗರ ತಾಲೂಕಿನ ಕಣಿವೆ ಗ್ರಾಮ ಹುಲುಸೆ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಈಗಾಗಲೇ ಲೋಕಾರ್ಪಣೆಗೊಂಡಿದೆ. ಫೆಬ್ರವರಿ ಒಂದರಿಂದ ತಿಂಗಳ ಅಂತ್ಯದ ತನಕ ಈ ಎಲ್ಲ ಸೇವಾ ಕಾರ್ಯಗಳು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಮಾರ್ಚ್ ಒಂದರಂದು ಕುಶಾಲನಗರ ರೋಟರಿಯ ಸುವರ್ಣ ಮಹೋತ್ಸವ ಸಮಾರಂಭ ಕಾರ್ಯಕ್ರಮ ನಡೆಯಲಿದೆ ಎಂದು ಮನು ಪೆಮ್ಮಯ್ಯ ಸಮಗ್ರ ಮಾಹಿತಿ ಒದಗಿಸಿದರು. ಈ ಸಂದರ್ಭ ಮಾತನಾಡಿದ ಸುವರ್ಣ ಮಹೋತ್ಸವ ಆಚರಣೆ ಕೇಂದ್ರ ಸಮಿತಿಯ ಚೇರ್ಮನ್ ಎಸ್ ಕೆ ಸತೀಶ್, ಕಳೆದ 50 ವರ್ಷಗಳಿಂದ ರೋಟರಿ ಕುಶಾಲನಗರ ಹಲವು ಸೇವೆಗಳನ್ನು ಸಾರ್ವಜನಿಕ ವಲಯಗಳಲ್ಲಿ ಹಮ್ಮಿಕೊಂಡಿದೆ.

ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಎರಡು ಡಯಾಲಿಸಿಸ್ ಘಟಕಗಳನ್ನು ನೀಡಿದೆ. ಮಡಿಕೇರಿ ಅಶ್ವಿನಿ ಆಸ್ಪತ್ರೆಗೆ ಲಕ್ಷಾಂತರ ಮೌಲ್ಯದ ಅಗತ್ಯ ಸಲಕರಣೆಗಳು ಕುಶಾಲನಗರ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರು, ಅಂಗ ವೈಕಲ್ಯತೆ ಹೊಂದಿದ ವಿಕಲಾಂಗರಿಗೆ ಅಗತ್ಯವಾದ ಕೃತಕ ಕಾಲು ಜೋಡಣೆ, ಕುಶಾಲನಗರ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಆರೋಗ್ಯ ಶಿಬಿರಗಳು ಸೇರಿದಂತೆ 10 ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ರೋಟರಿ ಕುಶಾಲನಗರ ಕಾರ್ಯದರ್ಶಿ ಹೆಚ್ ಪಿ ಮಂಜುನಾಥ್, ಸುವರ್ಣ ಮಹೋತ್ಸವ ಸಮಿತಿಯ ಪ್ರಮುಖರಾದ ಮಹೇಶ್ ಕುಮಾರ್ ನಾಲ್ವಡೆ, ಕೃಜ್ವಲ್ ಕೋಟ್ಸ್, ಎಂ ಡಿ ರಂಗಸ್ವಾಮಿ, ಕೆ ಎಸ್ ರಾಜಶೇಖರ್, ಆರತಿ ಎ ಶೆಟ್ಟಿ, ಸಹಾಯಕ ರಾಜ್ಯಪಾಲರಾದ ಉಲ್ಲಾಸ್ ಕೃಷ್ಣ ಇದ್ದರು.

ನೆರವು ಹಸ್ತಾಂತರ

ರೋಟರಿ ಕುಶಾಲನಗರದ ಸುವರ್ಣ ಮಹೋತ್ಸವ ಅಂಗವಾಗಿ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯ ಕಟ್ಟಡ ನಿರ್ವಹಣೆಗಾಗಿ ರು 50 ಸಾವಿರ ಸಹಾಯ ಹಸ್ತ ನೀಡುವುದಾಗಿ ಈ ಸಂದರ್ಭ ರೋಟರಿ ಅಧ್ಯಕ್ಷರಾದ ಮನು ಪೆಮ್ಮಯ್ಯ ಘೋಷಿಸಿದರು. ಇದೇ ಸಂದರ್ಭ ಪ್ರಥಮ ಕಂತಿನಲ್ಲಿ ರು. 25000 ಮೊತ್ತದ ಚೆಕ್ ಅನ್ನು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಅವರಿಗೆ ಹಸ್ತಾಂತರಿಸಿದರು.