ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಮಾರ್ಚ್ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಗರದ ಕದ್ರಿ ದೇವಾಲಯ ಪರಿಸರದಲ್ಲಿ ಭಾನುವಾರ ನಡೆಯಿತು.

ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ ಹಾಗೂ ಕೆನಡಾ ಒಂಟಾರಿಯೊ ಸರ್ಕಾರದ ಆರ್ಥಿಕ ತಜ್ಞ ಪ್ರಾಂಜಲ್ ಘಾಟೆ ಶ್ರಮದಾನಕ್ಕೆ ಚಾಲನೆ ನೀಡಿದರು.ಶ್ರಮದಾನ ಚಟುವಟಿಕೆಗಳ ಭಾಗವಾಗಿ ಬಾಲಕೃಷ್ಣ ಭಟ್, ಅನಿರುದ್ಧ ನಾಯಕ್, ಪ್ರಕಾಶ್, ರಾಮಚಂದ್ರ ಭಟ್, ಗಂಗಾಧರ ಶಾಸ್ತ್ರಿ, ಪದ್ಮನಾಭ ಸಾಲಿಯನ್, ಅವಿನಾಶ್, ಬಬಿತಾ ಶೆಟ್ಟಿ, ರಾಜೀವಿ ಚಂದ್ರಶೇಖರ್, ಸುಕುಮಾರ್ ಸಾಲಿಯನ್ ಹಾಗೂ ಇತರ ಹಿರಿಯ ಸ್ವಯಂ ಸೇವಕರು ಕದ್ರಿ ದೇವಸ್ಥಾನದ ಪಾರ್ಕಿಂಗ್ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕಸ ತೆರವುಗೊಳಿಸುವ ಜತೆಗೆ ಅಸಮರ್ಪಕ ಬ್ಯಾರಿಕೇಡ್‌ಗಳು ಮತ್ತು ಅನಗತ್ಯ ಫಲಕಗಳನ್ನು ತೆರವುಗೊಳಿಸಿ, ಪಾರ್ಕಿಂಗ್ ಸಿಬ್ಬಂದಿಗೆ ಜಾಗೃತಿ ಮೂಡಿಸಿದರು. ಭಕ್ತರು ಲಭ್ಯವಿರುವ ಕಸದ ಬುಟ್ಟಿಗಳನ್ನು ಸರಿಯಾಗಿ ಬಳಸುವಂತೆ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪ್ರೇರೇಪಿಸಿದರು.ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಉಪನ್ಯಾಸಕರಾದ ಡಾ. ಪುರುಷೋತ್ತಮನ್ ಚಿಪ್ಪಾಲ, ಡಾ. ಜಯೇಶ್ ಚಂದ್ರನ್, ಡಾ. ರುಚಿತಾ, ಡಾ. ಹೇಮಂತ್ ಹಾಗೂ ಸೋಕ್ರಟೀಸ್ ನೇತೃತ್ವದಲ್ಲಿ ವಿದ್ಯಾರ್ಥಿ ಸ್ವಯಂಸೇವಕರ ತಂಡವು ಸ್ವಚ್ಛತಾ ಕಾರ್ಯ ಕೈಗೊಂಡಿತು. ರಸ್ತೆಯ ಇಕ್ಕೆಲಗಳಲ್ಲಿ ಜಮೆಗೊಂಡ ಕಸವನ್ನು ತೆರವುಗೊಳಿಸಿ, ಮರುಬಳಕೆ ಸಾಧ್ಯವಿಲ್ಲದ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ, ಅನಧಿಕೃತ ಬ್ಯಾನರ್‌ಗಳನ್ನು ತೆಗೆದುಹಾಕಿದರು. ಧಾರ್ಮಿಕ ತ್ಯಾಜ್ಯಗಳ ಸಂಗ್ರಹ: ವಿಶೇಷ ಉಪಕ್ರಮದ ಭಾಗವಾಗಿ ತಾರಾನಾಥ ಆಳ್ವ, ಕಮಲಾಕ್ಷ ಪೈ, ದಿಲ್‌ರಾಜ್ ಆಳ್ವ, ಸಚಿನ್ ಶೆಟ್ಟಿ, ಭವಿತ್ ಸಾಲಿಯಾನ್, ವರುಣ್, ಗಗನ್, ಯಲ್ಲಪ್ಪ, ಮಂಜುನಾಥ್ ಸೇರಿದಂತೆ ಇತರ ವಿದ್ಯಾರ್ಥಿ ಸ್ವಯಂಸೇವಕರು ಕದ್ರಿ ವೃತ್ತದಲ್ಲಿ ಜಮೆಗೊಂಡಿದ್ದ ಧಾರ್ಮಿಕ ತ್ಯಾಜ್ಯಗಳನ್ನು ಸಂಗ್ರಹಿಸುವ ಕಾರ್ಯ ಕೈಗೊಂಡರು. ಇದರಲ್ಲಿ ಹಿಂದು ದೇವತೆಗಳ ಚಿತ್ರಪಟಗಳು ಹಾಗೂ ಮೂರ್ತಿಗಳು ಸೇರಿದ್ದವು. ಇವುಗಳ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸ್ವಯಂಸೇವಕರು ಅವುಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿದರು. ಈ ತ್ಯಾಜ್ಯಗಳನ್ನು ಮುಂದಿನ ದಿನಗಳಲ್ಲಿ ಸ್ವಚ್ಛ ಮಂಗಳೂರು ತಂಡವು ವಿಶೇಷ ಅಭಿಯಾನದ ಮೂಲಕ ಗೌರವಪೂರ್ವಕವಾಗಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡಲಿದೆ.

ಭಾರತೀಯ ಸೇನೆಯ ನಿವೃತ್ತ ಯೋಧ ಕ್ಯಾ. ಗಣೇಶ್ ಕಾರ್ಣಿಕ್ ಹಾಗೂ ಸ್ವಚ್ಛ ಮಂಗಳೂರು ಸಂಯೋಜಕ ರಂಜನ್ ಬೆಳ್ಳರ್ಪಾಡಿ ಇದ್ದರು.