ನರಸಿಂಹರಾಜಪುರಸ್ವಾಮಿ ವಿವೇಕಾನಂದರು ಆದ್ಯಾತ್ಮಿಕ ಚಿಂತಕರಾಗಿದ್ದು ಯುವ ಜನರಿಗೆ ಆದರ್ಶವಾಗಿದ್ದಾರೆ ಎಂದು ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಹಾಗೂ ಲೇಖಕಿ ಮೀನಾಕ್ಷಿ ಕಾಂತರಾಜ್ ತಿಳಿಸಿದರು.
- ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸ್ವಾಮಿ ವಿವೇಕಾನಂದರು ಆದ್ಯಾತ್ಮಿಕ ಚಿಂತಕರಾಗಿದ್ದು ಯುವ ಜನರಿಗೆ ಆದರ್ಶವಾಗಿದ್ದಾರೆ ಎಂದು ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಹಾಗೂ ಲೇಖಕಿ ಮೀನಾಕ್ಷಿ ಕಾಂತರಾಜ್ ತಿಳಿಸಿದರು.
ಸೋಮವಾರ ಸೌತಿಕೆರೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಇಬ್ಬರು ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 1863 ರಲ್ಲಿ ಸ್ವಾಮಿ ವಿವೇಕಾನಂದರು ಜನಿಸಿದರು.10 ಮಕ್ಕಳಲ್ಲಿ ವಿವೇಕಾನಂದರು 6 ನೇ ಯವರಾಗಿದ್ದರು. ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರ ದತ್ತ. ಅವರು ಸಮಾಜ ಸುಧಾಕರು, ದೇಶಪ್ರೇಮಿ ಯಾಗಿದ್ದರು.1893 ರಲ್ಲಿ ಚಿಕೋಗೋದಲ್ಲಿ 30 ವರ್ಷದ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಜಗತ್ತಿನಲ್ಲೇ ಪ್ರಸಿದ್ಧಿಯಾಗಿತ್ತು. ಅವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದ ಯಾತ್ರೆ ಮಾಡಿದ್ದರು ಎಂದರು.ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಕ್ಕಳ ಸಾಧನೆ ದೊಡ್ಡದಾಗಿದೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಪಯಣ ಸಾಗಿದೆ .ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ತಂದೆ, ತಾಯಿ, ಶಿಕ್ಷಕರ ಮಾರ್ಗದರ್ಶನಿಂದ ಮಕ್ಕಳು ಉತ್ತಮ ಸಂಸ್ಕಾರ ಪಡೆಯಬೇಕು ಎಂದು ಕರೆ ನೀಡಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಜ್ಲಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ. ಗೌಡ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರಾದ ದ್ರವ್ಯ ಹಾಗೂ ಪ್ರತೀಕ್ಷ ರಾಜ್ಯಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ತಾಲೂಕಿಗೆ ಹೆಮ್ಮೆ. ಮುಂದೆ ರಾಷ್ಟ್ರ ಮಟ್ಟದಲ್ಲಿ ಮೊದಲನೇ ಸ್ಥಾನ ಪಡೆದು ರಾಜ್ಯಕ್ಕೆ , ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಕೀರ್ತಿ ತರಲಿ. ಇಂದು ಈ ಇಬ್ಬರು ವಿದ್ಯಾರ್ಥಿನಿಯರನ್ನು ಜೇಸಿ ಸಂಸ್ಥೆಯಿಂದ ಅಭಿನಂದಿಸಲಾಗುವುದು ಎಂದರು.ಜೇಸಿ ಸಂಸ್ಥೆಯ ಕಿರಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಕ್ಷತ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೇಸಿ ಸಂಸ್ಥೆ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದ್ದು ಈ ವರ್ಷದ ಜೇಸಿ ಅಧ್ಯಕ್ಷ ಹಾಗೂ ಕಾರ್ಯದರ್ಶಿನಿರಂತರವಾಗಿ ಉತ್ತಮ ಗುಣಮಟ್ಟದ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 10 ನೇ ತರಗತಿಯ ದ್ರವ್ಯ, ಪ್ರತೀಕ್ಷರನ್ನು ಸನ್ಮಾನಿಸಲಾಯಿತು.ಅತಿಥಿಗಳಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಅಜ್ಜಪ್ಪ, ಜೇಸಿ ಕಾರ್ಯದರ್ಶಿ ರಜತ್ ವಗಡೆ ವಿಶ್ವನಾಥ್ , ಕೂಸ್ಗಲ್ ಮನು, ಚರಣರಾಜ್, ಸತ್ಯಪ್ರಸಾದ್, ದೇವಂತರಾಜ್, ವಿನಯ, ಜೋಯಿ ಬ್ರೋ, ಪ್ರಥಮ್, ಶ್ರೀ ಹರಿ, ಮಂಜುನಾಥ್ ಉಪಸ್ಥಿತರಿದ್ದರು.