ಸಾರಾಂಶ
ಚಿಕ್ಕಮಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ಉಪ್ಪಳ್ಳಿಯ ಬಳಿ ಹರಿಯುವ ಯಗಚಿ ಉಪನದಿಯನ್ನು ಶುದ್ಧೀಕರಿಸುವ ಮೂಲಕ ಬದ್ಧತೆ ಪ್ರದರ್ಶಿಸಬೇಕಾಗಿದೆ ಎಂದು ಬಸವತತ್ತ್ವ ಪೀಠಾಧ್ಯಕ್ಷ ಡಾ.ಶ್ರೀಬಸವಮರುಳಸಿದ್ದ ಸ್ವಾಮೀಜಿ ಕರೆ ನೀಡಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಪ್ರಶಸ್ತಿ ವಿತರಿಸಿ ಮಾತನಾಡಿದರು. ಸುಂದರ ಪ್ರಕೃತಿ ಚಿಕ್ಕಮಗಳೂರು ಮೋಜುಮಸ್ತಿ ಮಾಡುವ ಪ್ರವಾಸೋದ್ಯಮಕ್ಕೆ ತುತ್ತಾಗಿದೆ. ನಾವು ಪರಿಸರದ ಬಗ್ಗೆ ರಚನಾತ್ಮಕವಾದ ಆಲೋಚನೆ ಹೊಂದಿಲ್ಲ. 12 ವರ್ಷಕ್ಕೊಮ್ಮೆ ಗಿರಿಪ್ರದೇಶದಲ್ಲಿ ಅರಳುತ್ತಿದ್ದ ನೀಲಿ ಕುರುಂಜಿ ಈಗ 14 ವರ್ಷ ತೆಗೆದು ಕೊಳ್ಳುತ್ತಿರುವುದು ಪರಿಸರದ ಸ್ಥಿತಿ ತಿಳಿಸುತ್ತದೆ. ಪರಿಸರದ ನಾಶ ಬದುಕು, ಭಾಷೆ ಸಂಸ್ಕೃತಿ ಅವನತಿಯೂ ಹೌದು ಎಂದು ವಿಷಾದಿಸಿದರು.
ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯಲ್ಲಿ ಯಗಚಿ ಉಪ ನದಿ ಚರಂಡಿಯಂತೆ ಹರಿಯುತ್ತಿದೆ. ಇಲ್ಲಿಗೆ ಬಂದು ನಾಲ್ಕು ವರ್ಷ ವಾದರೂ ಉಪನದಿ ಹರಿಯುತ್ತಿರುವುದು ಗೊತ್ತಿರಲಿಲ್ಲ. ಮೊನ್ನೆ ಸಮಾರಂಭವೊಂದಕ್ಕೆ ಹೋದಾಗ ನೋಡಿ ನೋವಾಯಿತು. ಕಲುಷಿತವಾಗಿ ಕೊಳಕಿನಿಂದ ಹರಿದು ಮುಂದೆ ಇದೇ ನೀರು ಯಗಚಿ ಅಣೆಕಟ್ಟೆ ಸೇರಿ ಅಲ್ಲಿಂದ ನಮ್ಮೂರಿಗೆ ಕುಡಿಯುವ ನೀರಾಗಿ ಬರುತ್ತಿದೆ. ಇದೊಂದು ಆತಂಕ ದಾಯಕ ಅಷ್ಟೇ ಅಲ್ಲ ನಾಚಿಕೆ ಸಂಗತಿ ಎಂದು ಹೇಳಿದರು. ಪರಿಸರದ ಬಗ್ಗೆ ಉದ್ದದ ಮಾತು ಹೇಳುವುದಿಲ್ಲ. ಪಶ್ಚಿಮಘಟ್ಟದ ದೊಡ್ಡ ಸಂಗತಿಯತ್ತವೂ ಹೋಗುವುದಿಲ್ಲ. ನಮ್ಮ ಪರಿಸರದ ಸಣ್ಣ ಉಪನದಿ ಯನ್ನು ನದಿಯಾಗಿ ಅಲ್ಲದಿದ್ದರೂ ಸಣ್ಣ ಕಾಲುವೆಯಾಗಿಯಾದರೂ ಶುದ್ಧವಾಗಿಟ್ಟುಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ. ಇದಕ್ಕಾಗಿ ಒಂದು ವರ್ಷ ಅವಧಿಯ ಕಾಲಮಿತಿ ನಿಗದಿಸಿಕೊಂಡು ಎಲ್ಲರೂ ಕೈಜೋಡಿಸಿ ಕಾರ್‍ಯಪ್ರವೃತ್ತರಾಗುವ ಮೂಲಕ ನಾಗರಿಕ ಪ್ರಜ್ಞೆ ಪರಿಸರ ಕಾಳಜಿ ತೋರ ಬೇಕೆಂದರು.ಸ್ಥಳೀಯ ಭಾಷೆಗಳು ಅಸ್ಥಿತ್ವ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದ ನಿರಭಿಮಾನ ಕನ್ನಡಿಗರದ್ದಾಗಿದೆ. ಭಾಷೆ ಹುಟ್ಟು ಬದುಕಿನ ಕಾರಣಕ್ಕೆ. ಬದುಕಿನ ಜೊತೆಗೇ ಭಾಷೆಯೂ ಬೆಳೆಯುತ್ತದೆ. ಭಾಷೆ ಮೂಲಕ ಬದುಕು ಕಟ್ಟಿಕೊಳ್ಳಬಹುದೆಂಬ ಅವಕಾಶ, ಭರವಸೆ ಇಲ್ಲದಾಗ ಭಾಷೆ ಸಾಯುತ್ತದೆ ಎಂದ ಸ್ವಾಮೀಜಿ, ಪಾಶ್ಚಾತ್ಯ ಬದುಕು, ಉಡುಪು, ಆಹಾರ ಕುರಿತಂತೆ ನಮ್ಮ ಆಕರ್ಷಣೆ, ಅಭಿಮಾನ, ಅಭಿವ್ಯಕ್ತಿ ಪರಿಣಾಮ ನಮ್ಮತನ ಕಳೆದುಕೊಳ್ಳುತ್ತಿದ್ದೇವೆಂದು ವಿಷಾದಿಸಿದರು.
ಸಮಾರೋಪ ಭಾಷಣದಲ್ಲಿ ಸಾಹಿತಿ ಡಾ.ರಮೇಶ್ಚಂದ್ರ ದತ್ತ ಸಮ್ಮೇಳನ ಸರ್ವಾಧ್ಯಕ್ಷರ ಚಿಂತನೆಗಳನ್ನು ಸಮರ್ಥಿಸಿ ಮಾತನಾಡಿ, ಸೂಕ್ಷ್ಮತೆ ಗಳನ್ನು ಉಳಿಸಿಕೊಂಡಾಗ ನಾಡು ನುಡಿ ಅಭಿವೃದ್ಧಿ ಸಾಧ್ಯ. ಸಾಹಿತ್ಯ ಬದುಕಿಗೆ ಸ್ಫೂರ್ತಿ ನೀಡುತ್ತದೆ. ಸಾಹಿತ್ಯ ಸಮ್ಮೇಳನಗಳು ಪ್ರಸ್ತುತ ಸಮಸ್ಯೆಗಳತ್ತ ಬೆಳಕು ಚೆಲ್ಲದಿರುವುದೇ ದೊಡ್ಡ ಕೊರತೆ. ಕೆಲವರ ಲಾಭಕ್ಕಾಗಿ ನಮ್ಮ ಪರಿಸರ ನಾಶವಾಗುವುದನ್ನು ತಪ್ಪಿಸಬೇಕು. ಸಾಹಿತ್ಯದ ಜೊತೆ ಜೊತೆಗೆ ವಿವಿಧ ವಿಚಾರಗಳ ಚಿಂತನೆಗೆ ಸಮ್ಮೇಳನಗಳು ವೇದಿಕೆಯಾಗಬೇಕೆಂದರು.ಆಶಾಕಿರಣದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬೆಳವಾಡಿಮಂಜುನಾಥ್ ಕೃತಜ್ಞತೆ ಸಲ್ಲಿಸಿದರು.ಚುಟುಕು ಸಾಹಿತಿ ಅರವಿಂದ ದೀಕ್ಷಿತ್ ಮತ್ತು ವಾಗ್ಮಿ ನಾಗಶ್ರೀ ತ್ಯಾಗರಾಜ್ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಲಾಯಿತು. ಸಾಹಿತಿ ತಿಪ್ಪೇರುದ್ರಪ್ಪ, ರಂಗಕರ್ಮಿ ಸುರೇಶ ದೀಕ್ಷಿತ್, ಶಿಕ್ಷಣತಜ್ಞ ಡಾ.ವಿನಾಯಕ, ಅಂಗನವಾಡಿ ಶಿಕ್ಷಕಿ ಎಸ್.ಶೈಲಾ ಬಸವರಾಜ್, ಡಿ.ಎಂ. ಮಂಜುನಾಥಸ್ವಾಮಿ, ಭೋಜೇಗೌಡ, ರೇಖಾ ನಾಗರಾಜರಾವ್, ಚಂದ್ರಶೇಖರ್ ನಾರಣಪುರ, ರಾಜೇಶ್, ಕಳವಾಸೆ ಚಂದ್ರೇಗೌಡ ಸೇರಿದಂತೆ 25 ಸಾಧಕರನ್ನು ಗೌರವಿಸಲಾಯಿತು.
ತಾಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್‍ಯದರ್ಶಿಗಳಾದ ಎಸ್.ಎಸ್.ವೆಂಕಟೇಶ್ ಮತ್ತು ಪವನ್, ಬಿ.ಆರ್.ಜಗದೀಶ್, ಕುಮಾರಸ್ವಾಮಿ, ರೂಪಾ ನಾಯ್ಕ ಮತ್ತು ಎನ್.ಅನಿತಾ , ಸಿ.ಎಂ.ಜ್ಯೋತಿ ಇದ್ದರು.--- ಬಾಕ್ಸ್---ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಗ್ರಹಚಿಕ್ಕಮಗಳೂರು: ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಜಿಲ್ಲಾ ಹಂತದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ’ಚಿಕ್ಕಮಗಳೂರು ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಗ್ರಹಿಸಿದೆ.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಕಲಾಮಂದಿರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನ ಬಿಸಲೇಹಳ್ಳಿ ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದು ನಾಲ್ಕು ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಿತು.ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಮೊದಲು ಜಿಲ್ಲಾ ಹಂತದಲ್ಲಿ ನೀಡಲಾಗುತ್ತಿತ್ತು. ಪ್ರಸ್ತುತ ರಾಜ್ಯ ಮಟ್ಟದಲ್ಲಿ ಮಾತ್ರ ಕೊಡಲ್ಪಡುತ್ತಿದೆ. ಚಿಕ್ಕಮಗಳೂರಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲು ಅವಕಾಶವಾಗುವಂತೆ ಪ್ರತಿ ವರ್ಷ ಜಿಲ್ಲಾ ಹಂತದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.ಅಂಬಳೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿದ್ದ ಎ.ಆರ್.ಕೃಷ್ಣಶಾಸ್ತ್ರಿ ಭವನ ಪೂರ್ಣವಾಗಿ ನಿರ್ಮಾಣವಾಗಬೇಕು. ಅಂಬಳೆ ಗ್ರಾಮಕ್ಕೆ ಹೋಗುವ ರಸ್ತೆಯ ಆರಂಭದಲ್ಲಿ ಕೃಷ್ಣಶಾಸ್ತ್ರಿಗಳ ಮಹಾದ್ವಾರ ನಿರ್ಮಾಣವಾಗಬೇಕು. ಹೊಸದಾಗಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣವಾಗುತ್ತಿದ್ದು ಈಗಿರುವ ಕಚೇರಿ ಕಟ್ಟಡವನ್ನು ಜಿಲ್ಲಾ ಸ್ಮಾರಕವಾಗಿ ಉಳಿಸಿಕೊಳ್ಳಬೇಕು. ಜಿಲ್ಲೆಯ ಶಾಸನ, ಸಾಹಿತ್ಯ, ಕೃಷಿ ಪರಂಪರೆ, ಕಲಾಕೃತಿ ಸೇರಿದಂತೆ ಜಿಲ್ಲೆಯ ಸಾಂಸ್ಕೃತಿಕ ಮಾಹಿತಿ ಮತ್ತು ಅಧ್ಯಯನ ಕೇಂದ್ರವಾಗುವ ಜೊತೆಗೆ ಅಲ್ಲಿ ಕನ್ನಡದ ಕಾರ್ಯಚಟುವಟಿಕೆಗಳನ್ನು ನಡೆಸಲು ಅವಕಾಶ ವಾಗಬೇಕು.
ಶ್ರೇಷ್ಠ ಮತ್ತು ಸುಂದರ ಪ್ರಕೃತಿ ತಾಣವಾದ ಚಿಕ್ಕಮಗಳೂರು ತನ್ನದೇ ಆದ ವೈಶಿಷ್ಟ್ಯದಿಂದ ಸಹೃದಯಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗಿರಿಶ್ರೇಣಿ ಸ್ವಚ್ಛತೆಗೆ ಜಿಲ್ಲಾಡಳಿತ ಸೂಕ್ತ, ನಿರಂತರ ಕ್ರಮಕೈಗೊಳ್ಳಬೇಕೆಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.--- 30 ಕೆಸಿಕೆಎಂ 3
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚುಟುಕು ಸಾಹಿತಿ ಅರವಿಂದ ದೀಕ್ಷಿತ್ ಮತ್ತು ವಾಗ್ಮಿ ನಾಗಶ್ರೀ ತ್ಯಾಗರಾಜ್ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.