ಶಿವಲಿಂಗದ ಮೇಲೆ ಪಾದಪೂಜೆಗೆ ಸ್ವಾಮಿಜಿ ಸಮರ್ಥನೆ

| Published : Sep 11 2024, 01:03 AM IST

ಸಾರಾಂಶ

ಗುರುಗಳ ಪಾದೋದಕವಿಲ್ಲದೆ ಸ್ಥಾಪಿಸಲ್ಪಟ್ಟ ಲಿಂಗವು ಪೂಜಾರ್ಹವಿಲ್ಲವೆಂದು ವೀರಶೈವ ನವರತ್ನ ಮತ್ತು ವೀರಶೈವ ದಶರತ್ನ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ದಿಗ್ಗಾಂವ ಪಂಚಗೃಹ ಹಿರೇಮಠ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರು ಸ್ಪಷ್ಟನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ/ಚಿತ್ತಾಪುರ

ಗುರುಗಳ ಪಾದೋದಕವಿಲ್ಲದೆ ಸ್ಥಾಪಿಸಲ್ಪಟ್ಟ ಲಿಂಗವು ಪೂಜಾರ್ಹವಿಲ್ಲವೆಂದು ವೀರಶೈವ ನವರತ್ನ ಮತ್ತು ವೀರಶೈವ ದಶರತ್ನ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ದಿಗ್ಗಾಂವ ಪಂಚಗೃಹ ಹಿರೇಮಠ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರು ಸ್ಪಷ್ಟನೆ ನೀಡಿದ್ದಾರೆ.

ತಾಲೂಕಿನ ದಿಗ್ಗಾಂವ ಪಂಚಗೃಹ ಹಿರೇಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇಡಂ ತಾಲೂಕಿನ ದಿಗ್ಗಾಂವ ಶಾಖಾಮಠದ ಕಲಕಂಬ ಗ್ರಾಮದ ಈಶ ಬಸವೇಶ್ವರ ದೇವಾಲಯದ ಶಿವಲಿಂಗ ನೆಲದಲ್ಲಿ ಹುದುಗಿ ಹೋಗಿತ್ತು, ಹೀಗಾಗಿ ಹೊಸದಾಗಿ ಲಿಂಗ ಸ್ಥಾಪಿಸಿ ಅದಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಬೇಕಾದರೆ ಧ್ಯಾನವಾಸ, ಜಲವಾಸ, ಶೈನವಾಸ, ಪುಷ್ಪವಾಸ ಇತ್ಯಾದಿ ಕ್ರಿಯೆಗಳೊಂದಿಗೆ ಶಿವಲಿಂಗ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

ಗುರುಗಳ ಪಾದೋದಕ ಇಲ್ಲದೆ ಶಿವಲಿಂಗ ಸ್ಥಾಪನೆ ಮಾಡಲು, ಪೂಜೆ ಮಾಡಲು ಯೋಗ್ಯವಿಲ್ಲ ಎಂದು ಹೇಳಿದ ಅವರು, ಎಲ್ಲ ಪೂಜೆ ಮುಗಿದ ನಂತರ ಗೆದ್ದುಗೆ ಮೇಲೆ ಲಿಂಗ ಸ್ಥಾಪನೆ ಮಾಡಿದ ಮೇಲೆ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಆ ಶಿಲೆ ಆಕಾರ ಹೋಗಿ ದೈವತ್ವ ಪ್ರಾಪ್ತಿಯಾಗುತ್ತದೆ ಎಂದರು.

ಧರ್ಮಗ್ರಂಥಗಳ ಆಧಾರದಲ್ಲಿ ಪ್ರಾಣ ಪ್ರತಿಷ್ಠಾಪನೆ ಪಾದೋದಕ ಮಾಡಲಾಗಿದೆ. ಆದರೆ, ಇದನ್ನೇ ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ನಾನೇಕೆ ಶಿವಲಿಂಗಕ್ಕೆ ಒದೆಯಲಿ? ನಾನು ಇಲ್ಲಿವರೆಗೆ ಸಾಕಷ್ಟು ಶಿವಲಿಂಗ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದೇನೆ. ಆದರೆ ಈಗ ಮೊಬೈಲ್ ಇರುವುದರಿಂದ ಇಂತಹ ವಿಡಿಯೋಗಳು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಗೊಂದಲ ಸೃಷ್ಟಿ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಈಗಲೂ ನಾನು ಸಮರ್ಥನೆ ಮಾಡಿಕೊಳ್ಳುವೆ. ನಾನು ಯಾವುದೇ ತಪ್ಪು ಮಾಡಿಲ್ಲ, ಧರ್ಮ ಗ್ರಂಥಗಳ ಪ್ರಕಾರ ಮಾಡಿದ್ದೇನೆ ಎಂದರು.

ಈ ಪದ್ಧತಿಯು ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿದ್ದು, ಅದರಲ್ಲೂ ಶಿವಲಿಂಗ ಸ್ಥಾಪನೆಗೆ ಈ ಪದ್ಧತಿಯು ಜಾರಿಯಲ್ಲಿದ್ದು ಪಾದೋದಕ ಇಲ್ಲದೇ ಪ್ರತಿಷ್ಠಾಪನೆಗೆ ಅರ್ಹರಾಗುವುದಿಲ್ಲ. ಹೀಗಾಗಿ ನಾವು ಹಲವಾರು ಕಡೆ ಈ ರೀತಿಯಾಗಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು, ಈಗ ಈರೀತಿಯಾಗಿ ಬೆಳವಣಗೆಯಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸೋಮಶೇಖರ ಶಾಸ್ತ್ರಿ, ನಾಗಭೂಷಣ ದಿಗ್ಗಾಂವ, ಶರಣು ಉಡಗಿ, ಬಸವಂತರಾವ್ ಮಾಲಿ ಪಾಟೀಲ್, ಶರಣು ಕೋರಿ, ಶಂಭುಲಿಂಗಪ್ಪ ಸಂಗಾವಿ, ಮಹಾದೇವ ಹಣಿಕೇರಿ, ಶಿವನಾಗಪ್ಪ ಮುತ್ತಲಗಡ್ಡಿ, ಕಾಶಪ್ಪ ದುಗನೂರ, ರೇವಣಸಿದ್ದಯ್ಯ ಸ್ವಾಮಿ ಕಲಕಂ, ಚಂದ್ರು ಗೌನಳ್ಳಿ ಸೇರಿದಂತೆ ಇತರರು ಇದ್ದರು.