ಯಲಬುರ್ಗಾ: ಪಟ್ಟಣದ ಸಂಸ್ಥಾನ ಹಿರೇಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಸಹೋದರರು ಮಠದ ಭಕ್ತರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ನಡೆದುಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಶರಣಪ್ಪ ಬೇಲೇರಿ ಆಗ್ರಹಿಸಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠದ ಭಕ್ತರು ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಭಕ್ತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.ಸಿದ್ಧರಾಮೇಶ್ವರ ಸ್ವಾಮೀಜಿ ಬಗ್ಗೆ ಭಕ್ತರು ಅಪಾರ ಗೌರವ ಹೊಂದಿದ್ದಾರೆ. ಭಕ್ತರು ಮಠದ ಲೆಕ್ಕಪತ್ರ ಕೇಳುವದನ್ನೇ ಸ್ವಾಮೀಜಿ ಹಾಗೂ ಅವರ ಸಹೋದರರು ತಪ್ಪು ಎಂಬ ಭಾವನೆ ಹೊಂದಿ ಕೋಪಗೊಳ್ಳುತ್ತಿರುವುದು ಸಮಂಜಸವಲ್ಲ. ಸ್ವಾಮೀಜಿಗಳು ತಪ್ಪು ಮಾಡಿದಾಗ ಸರಿದಾರಿಗೆ ತರುವ ಅಧಿಕಾರ ಭಕ್ತರಿಗಿದೆ. ಮಠದ ಪ್ರತಿಯೊಂದು ವಿಷಯದಲ್ಲಿ ಸ್ವಾಮೀಜಿಯವರ ಕುಟುಂಬದವರ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಆರೋಪಿಸಿದರು.
ಮಠದ ಆಸ್ತಿ ವಿಷಯದಲ್ಲಿ ಸ್ವಾಮೀಜಿಯವರು ಭಕ್ತರ ಹಕ್ಕೋತ್ತಾಯಕ್ಕೆ ಮನ್ನಣೆ ನೀಡಬೇಕು. ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬಹಿರಂಗ ಪಡಿಸಬೇಕಾಗುತ್ತದೆ. ಸ್ವಾಮೀಜಿ ಹಾಗೂ ಸಹೋದರರಿಂದ ಮಠದ ಭಕ್ತರಿಗೆ ಆಗುವ ಅನ್ಯಾಯ ಖಂಡಿಸಲು ಒಗ್ಗಟ್ಟು ಪ್ರದರ್ಶನ ಮಾಡಬೇಕಾಗುತ್ತದೆ ಎಂದರು.ಮುಖಂಡ ದಾನನಗೌಡ ತೊಂಡಿಹಾಳ ಮಾತನಾಡಿ, ನಾವು ಸ್ವಾಮೀಜಿಯ ವಿರುದ್ಧ ಮಾಡಿದ ಆರೋಪಗಳಿಗೆ ಬದ್ಧರಾಗಿದ್ದೇವೆ. ಭಕ್ತರ ಅಪೇಕ್ಷೆಯಂತೆ ಸ್ವಾಮೀಜಿ ನಡೆದುಕೊಳ್ಳಲಿ.ಮಠದಿಂದ ನಡೆಯುತ್ತಿರುವ ಅನುದಾನಿತ ಶಾಲೆಯಲ್ಲಿ ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣ ವಿದ್ಯಾರ್ಥಿ ಪಾಲಕರಿಂದ ವಸೂಲಿ ಮಾಡಲಾಗಿದೆ ಎಂದು ಆರೋಪಿಸಿದರು.
ಪಟ್ಟಣದ ಸಂಸ್ಥಾನ ಹಿರೇಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಪೀಠಕ್ಕೆ ಕೂಡಿಸಲು ಕಾರಣರಾದ ಅಸಂಖ್ಯಾತ ಭಕ್ತರೇ ಸದ್ಯದ ಪರಿಸ್ಥಿತಿಯಲ್ಲಿ ಸ್ವಾಮೀಜಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ.ಸ್ವಾಮೀಜಿ ಹಾಗೂ ಅವರ ಕುಟುಂಬಸ್ಥರ ನಡೆ ಬಹಿರಂಗ ವೇದಿಕೆಯಲ್ಲಿ ಖಂಡನೆ ಮಾಡುವ ಜತೆಗೆ ಗಂಭೀರ ಆರೋಪಗಳ ಸುರಿಮಳೆಗೈದರು.
ಮಠದ ಪರಂಪರೆ ಹಾಗೂ ಆಸ್ತಿ ಉಳಿಯಬೇಕಾದರೇ ಟ್ರಸ್ಟ್ ರಚನೆ ಮಾಡಬೇಕು ಎಂಬ ಒತ್ತಾಯ ಸಮಾವೇಶದಲ್ಲಿ ಕೇಳಿಬಂದವು.
ಮಠದ ಆಸ್ತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪತ್ತೆ ಹಚ್ಚಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಸಿ ಕ್ಯಾ.ಮಹೇಶ ಮಾಲಗಿತ್ತಿಯವರಿಗೆ ಮನವಿ ಸಲ್ಲಿಸಲಾಯಿತು.ಪ್ರಮುಖರಾದ ಸುರೇಶಗೌಡ ಶಿವನಗೌಡರ, ಶಂಕ್ರಪ್ಪ ಗಾಂಜಿ, ಸುರೇಶ ನಡುವಲಮನಿ, ಅಕ್ಕಮಹಾದೇವಿ ಬನ್ನಪ್ಪಗೌಡರ, ಸುಭಾಷ ಹೊಂಬಳ ಮಾತನಾಡಿದರು.
ಈ ಸಂದರ್ಭದಲ್ಲಿ ವೀರನಗೌಡ ಬನ್ನಪ್ಪಗೌಡರ, ತಹಸೀಲ್ದಾರ ಪ್ರಕಾಶ ನಾಶಿ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪ್ರಕಾಶ ಬೇಲೇರಿ, ಶಿವಪ್ಪ ಹಡಪದ, ಈರಪ್ಪ ಕುಡಗುಂಟಿ, ಶಿವಾನಂದ ಬಣಕಾರ ಸೇರಿದಂತೆ ಇನ್ನಿತರರು ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದರು.