ಮಠದ ಆಸ್ತಿ ಅಡ ಇಟ್ಟು ಸಾಲ ಪಡೆದ ಸ್ವಾಮೀಜಿ

| Published : Mar 21 2024, 01:06 AM IST

ಸಾರಾಂಶ

ಹಾನಗಲ್ಲಿನಲ್ಲಿರುವ ಶ್ರೀ ಕುಮಾರೇಶ್ವರ ವಿರಕ್ತಮಠ ತನ್ನದೇ ಆದ ಆಸ್ತಿಯನ್ನು ಹೊಂದಿದೆ. ಆದರೆ, ಈಗ ಶ್ರೀ ಮಠದ ಪೀಠಾಧಿಪತಿ ಆಗಿರುವ ಗುರುಸಿದ್ಧ ರಾಜಯೋಗೀಂದ್ರ ಶ್ರೀ ಭಕ್ತರ ಗಮನಕ್ಕೆ ತಾರದೇ ಶ್ರೀಮಠದ ಆಸ್ತಿಯನ್ನು ಅಡವಿಟ್ಟು ಕೋಟಿ ರೂ ಸಾಲ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಾವೇರಿ

ಹಾನಗಲ್ಲಿನ ಶ್ರೀ ಕುಮಾರೆಶ್ವರ ವಿರಕ್ತಮಠದ ಆಸ್ತಿ ಅಡವಿಟ್ಟು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಕೋಟಿ ರುಪಾಯಿ ಸಾಲ ಮಾಡಿದ್ದು, ಭಕ್ತ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಸಾಲ ಪಡೆದ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಚರ್ಚೆಯಲ್ಲಿ ಯಾವುದೇ ಒಬ್ಬ ಭಕ್ತನೂ ಸ್ವಾಮೀಜಿ ಮಾಡಿದ್ದು ಸರಿ ಎನ್ನದಿರುವುದು ವಿಶೇಷ. ಸ್ವಾಮೀಜಿಯ ಆಪ್ತವಲಯದ ಭಕ್ತರೂ ಈಗ ತಿರುಗಿಬಿದ್ದಿದ್ದು, ಮೂಜಗು ಏಕಾಂಗಿಯಾಗಿದ್ದಾರೆ.

ಈ ನಡುವೆ ಮಠದ ಅಧಿಕಾರ ನನ್ನದು. ಸಮಯ ಸಂದರ್ಭದ ಅಗತ್ಯಕ್ಕೆ ಸಾಲ ಮಾಡಿದ್ದು ಹೊಸದಲ್ಲ ಎಂದು ಶ್ರೀ ಮಠದ ಪೀಠಾಧಿಪತಿ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

ಮಠಕ್ಕೆ ಅಪಾರ ಆಸ್ತಿ:

ಹಾನಗಲ್ಲಿನಲ್ಲಿರುವ ಶ್ರೀ ಕುಮಾರೇಶ್ವರ ವಿರಕ್ತಮಠ ತನ್ನದೇ ಆದ ಆಸ್ತಿಯನ್ನು ಹೊಂದಿದೆ. ಇದು ಸಾರ್ವಜನಿಕವಾಗಿ ಬಹಳಷ್ಟು ಜನರಿಗೆ ತಿಳಿದ ಸಂಗತಿ. ಆದರೆ, ಈಗ ಶ್ರೀ ಮಠದ ಪೀಠಾಧಿಪತಿ ಆಗಿರುವ ಗುರುಸಿದ್ಧ ರಾಜಯೋಗೀಂದ್ರ ಶ್ರೀ ಭಕ್ತರ ಗಮನಕ್ಕೆ ತಾರದೇ ಶ್ರೀಮಠದ ಆಸ್ತಿಯನ್ನು ಅಡವಿಟ್ಟು ಕೋಟಿ ರೂ ಸಾಲ ಮಾಡಿದ್ದಾರೆ. ಶ್ರೀಮಠದ ಭಕ್ತರ ಗಮನಕ್ಕೆ ಇಲ್ಲದೆ, ಶ್ರೀಮಠದಲ್ಲಿ ಇಷ್ಟು ದೊಡ್ಡ ಸಾಲ ಮಾಡುವಂತಹ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆದಿಲ್ಲವಾದರೂ ಸಾಲ ಮಾಡಿದ್ದೇಕೆ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದ ಮೂಲಕ ಹರಿದಾಡುತ್ತಿದೆ.

ಹಾನಗಲ್ಲ, ಅಕ್ಕಿಆಲೂರು, ಹುಬ್ಬಳ್ಳಿ, ಶಿಕಾರಿಪುರ, ಹಾವೇರಿಗಳಲ್ಲಿರುವ ಶ್ರೀಮಠದ ಕೆಲ ಆಸ್ತಿಗಳು ಈಗಾಗಲೇ ಪರಭಾರೆಯಾಗಿವೆ. ಇದಕ್ಕೆ ಉತ್ತರ ಸಿಕ್ಕಿಲ್ಲ. ಇದರ ನಡುವೆ ಬಾದಾಮಿಯ ವೀರಪುಲಕೇಶಿ ಸಹಕಾರ ಬ್ಯಾಂಕಿನಲ್ಲಿ ಮಠದ ಆಸ್ತಿಗಳನ್ನು ಒತ್ತೆ ಇಟ್ಟು ಕೋಟಿಗಟ್ಟಲೇ ಹಣ ಸಾಲ ಪಡೆಯುವ ಅಗತ್ಯವೇನಿತ್ತು ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿವೆ.

ಜಾಲತಾಣಗಳಲ್ಲಿ ವೈರಲ್‌:

ಈ ವಿಷಯ ಸಾಲ ಮಾಡಿದ ಉತಾರಗಳ ಸಹಿತವಾಗಿ ಅಲ್ಲಿರುವ ಭೋಜಾ ಕಾಲಂನ ಮಾಹಿತಿಯಲ್ಲಿಯೂ ಸಾಲ ನಮೂದಾಗಿರುವ ಸಂಗತಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒತ್ತೆ ಇಟ್ಟಿರುವುದರಲ್ಲಿ ಹಾನಗಲ್ಲ ವಿರಕ್ತಮಠದ ೧೭ ಎಕರೆ ಜಮೀನು, ಕಲ್ಯಾಣಮಂಟಪ ಸೇರಿದಂತೆ ವಿವಿಧ ಆಸ್ತಿಗಳಿವೆ ಎಂದು ಭಕ್ತರು ಚರ್ಚಿಸುತ್ತಿದ್ದಾರೆ. ಆದರೆ, ಶ್ರೀಮಠದ ಸಂಪರ್ಕದಲ್ಲಿರುವ ಹಿರಿಯರು ಹಾಗೂ ಸೇವಾ ಸಮಿತಿಯವರು ಈ ಬಗ್ಗೆ ಮೌನವಾಗಿರುವುದು ಶಂಕೆ ಮೂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ವಾಮೀಜಿ, ಹಾನಗಲ್ಲ ಮಠದ ಆಸ್ತಿ ವಿಷಯದಲ್ಲಿ ಕಾನೂನು ಬಾಹಿರವಾಗಿ ಅಥವಾ ಮಠದ ಆಸ್ತಿಗೆ ಧಕ್ಕೆ ಬರುವ ಯಾವ ಕೆಲಸವನ್ನು ಮಾಡಿಲ್ಲ. ಶ್ರೀ ಮಠದ ಆಸ್ತಿಯ ಮೇಲೆ ಸಾಲ ಪಡೆಯುವುದು ಇದು ಮೊದಲಲ್ಲ. ಈ ಹಿಂದೆ ಪಡೆದ ಸಾಲವನ್ನು ಮರುಪಾವತಿ ಮಾಡಲಾಗಿದೆ. ಈಗ ಪಡೆದಿರುವ ಸಾಲದ ಬಹುಭಾಗವನ್ನು ಮರುಪಾವತಿ ಮಾಡಲಾಗಿದೆ. ಆದರೆ, ಭೋಜಾದಲ್ಲಿ ಉಳಿದಿದೆ ಅಷ್ಟೇ. ಸಧ್ಯದಲ್ಲಿ ಉಳಿದ ಸಾಲವನ್ನು ಮರುಪಾವತಿ ಮಾಡುವ ವ್ಯವಸ್ಥೆಯೂ ಆಗಿದೆ. ಇದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವ ಅಗತ್ಯವೇನಿದೆ. ಸಾಲದ ಉದ್ದೇಶ ಹಾಗೂ ಅದರ ಬಳಕೆ ಮರುಪಾವತಿಗೆ ಸಂಬಂಧಿಸಿದಂತೆ ನಮ್ಮ ಸಮಿತಿ ಹಾಗೂ ಭಕ್ತರೊಂದಿಗೆ ಚರ್ಚಿಸಿ ಕೆಲಸ ಮಾಡುತ್ತೇವೆ. ಇದರಲ್ಲಿ ಯಾವುದೇ ಕಾನೂನು ಬಾಹಿರ ಕೆಲಸವಾಗಿಲ್ಲ. ಮಠದ ಆಸ್ತಿಯ ವಿಷಯದಲ್ಲಿ ಆತಂಕ ಪಡುವ ಅವಶ್ಯಕತೆ ಇಲ್ಲ. ಈ ರೀತಿ ಸಾರ್ವಜನಿಕ ಚರ್ಚೆಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಮಠದ ಆಸ್ತಿ ಮಾರುವ ಅಗತ್ಯ ನನಗಿಲ್ಲ. ಆಸ್ತಿ ಮಾರುವದು ಹಾಗೂ ಮಠಕ್ಕೆ ಆಸ್ತಿ ಮಾಡುವುದು ಎಲ್ಲದಕ್ಕೂ ಮಠದ ಅಧಿಕಾರಿಯಾದ ನಾನು ಹಾಗೂ ಮಠದ ಭಕ್ತರು ಸೇರಿ ಯೋಚಿಸಿ ಮಾಡುತ್ತೇವೆ. ಅದು ಕಾನೂನು ಬಾಹಿರ ಅಲ್ಲ ಎಂದ ಮೇಲೆ ಇದಕ್ಕಾಗಿ ಹೆಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.

ಸರಿಯಾದ ಕ್ರಮವಲ್ಲ

ಮಠದ ಆಸ್ತಿಯ ಮೇಲೆ ಸಾಲ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಶ್ರೀಗಳು ಒಂದು ವಾರದಲ್ಲಿ ಸಭೆ ಕರೆದು ವಾಸ್ತವ ತಿಳಿಸುವುದಾಗಿ ಹೇಳಿದ್ದಾರೆ. ಮಠದ ಅಭಿವೃದ್ಧಿಗೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಹಣ ವೆಚ್ಚವಾಗಿಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ದೇಣಿಗೆ ನೀಡಿ ಕಾರ್ಯಕ್ರಮ ಮಾಡುತ್ತಾರೆ. ಶ್ರೀಗಳು ಮಾಹಿತಿ ನೀಡಿದ ಮೇಲೆ ತೀರ್ಮಾನಿಸುತ್ತೇವೆ.

ಚನ್ನವೀರಸ್ವಾಮಿ ಹಿರೇಮಠ, ಶ್ರೀಮಠದ ಭಕ್ತರು.

ಸಾಲ ಮಾಡಿದ್ದು ಗಮನಕ್ಕಿಲ್ಲ

ಶ್ರೀಮಠದ ಆಸ್ತಿಗಳನ್ನು ಈ ಹಿಂದಿನ ಮಠಾಧೀಶರ ಕಾಲದಲ್ಲಿಯೂ ಮಾರಾಟ ಮಾಡಲಾಗಿದೆ. ಈಗ ಗುರುಸಿದ್ಧ ರಾಜಯೋಗೀಂದ್ರರು ಯಾವ ಅಗತ್ಯಕ್ಕಾಗಿ ಹಾನಗಲ್ಲ ಮಠದ ಆಸ್ತಿಯ ಮೇಲೆ ಸಾಲ ಮಾಡಿದ್ದಾರೆ ಎಂಬುದು ನಮ್ಮ ಗಮನಕ್ಕೆ ಇಲ್ಲ. ಈ ಬಗ್ಗೆ ಶ್ರೀಗಳೊಂದಿಗೆ ಮಾತನಾಡಿದ್ದು, ನಾಲ್ಕಾರು ದಿನದಲ್ಲಿ ಇದರ ಪೂರ್ಣ ಮಾಹಿತಿ ನೀಡುವ ಭರವಸೆ ನೀಡಿದ್ದಾರೆ.

ಕಲ್ಯಾಣಕುಮಾರ ಶೆಟ್ಟರ, ಶ್ರೀಮಠದ ಸೇವಾ ಸಮಿತಿ ಸದಸ್ಯ.