ಸಾರಾಂಶ
ವಿ.ಎಂ. ನಾಗಭೂಷಣ
ಸಂಡೂರು: ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಬರುವ ಶ್ರೀಗಂಡಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಳಿ ೩೪೫ ಹೆಕ್ಟೇರ್ ಪ್ರದೇಶದಲ್ಲಿ ಹರಡಿದ ಔಷಧೀಯ ಸಸ್ಯಗಳ ಸಂರಕ್ಷಣಾ ಪ್ರದೇಶವು ಇನ್ನು ಮೂರ್ನಾಲ್ಕು ತಿಂಗಳಲ್ಲಿ ಹೊಸ ಚೈತನ್ಯದೊಂದಿಗೆ ಜಿಪ್‌ಲೈನ್, ರೋಪ್‌ವೇ ಪಡೆದುಕೊಳ್ಳುವ ಮೂಲಕ ಪ್ರಮುಖ ಪ್ರವಾಸಿ ತಾಣವಾಗುವತ್ತ ಹೆಜ್ಜೆ ಹಾಕಿದೆ.ಅಂದಾಜು ₹೬೫ ಲಕ್ಷ ವೆಚ್ಚದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣಾ ಕೇಂದ್ರದ ಅಭಿವೃದ್ಧಿ ಜೊತೆಗೆ ಅಲ್ಲಿಯೇ ಜಿಪ್‌ಲೈನ್, ಲೋ ರೋಪ್ ಹಾಗೂ ಹೈ ರೋಪ್‌ಗಳನ್ನು ಅಳವಡಿಸುವ ಪ್ರಕ್ರಿಯೆಗೆ ಇತ್ತೀಚೆಗೆ ಸಂಸದ ಈ.ತುಕಾರಾಂ ಭೂಮಿಪೂಜೆ ನೆರವೇರಿಸಿದ್ದಾರೆ. ಕಾಮಗಾರಿಗಳು ಪೂರ್ಣಗೊಂಡರೆ, ಈ ಸ್ಥಳ ಪ್ರವಾಸಿಗರನ್ನು ಆಕರ್ಷಿಸಲಿದೆ; ಇದೊಂದು ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಲಿದೆ ಎಂಬ ಆಶಯ ಜನತೆಯದ್ದು.
ಔಷಧೀಯ ಸಸ್ಯ ಕ್ಷೇತ್ರದಲ್ಲಿ ಏನೇನಿದೆ?:ಇಲ್ಲಿನ ಔಷಧೀಯ ಸಸ್ಯಗಳ ಸಂರಕ್ಷಣಾ ಕ್ಷೇತ್ರದಲ್ಲಿ ನೂರಾರು ಜಾತಿಯ ಔಷಧೀಯ ಸಸ್ಯಗಳಿವೆ. ಇಲ್ಲಿಯೇ ಅರಣ್ಯ ಇಲಾಖೆಯ ಅತಿಥಿಗೃಹವಿದೆ. ಇಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿ, ಅವುಗಳ ಮುಂದೆ ಬೋರ್ಡ್‌ನಲ್ಲಿ ಅವುಗಳ ಹೆಸರು, ವೈಜ್ಞಾನಿಕ ಹೆಸರು, ಅವುಗಳ ಉಪಯೋಗ ಕುರಿತು ವಿವರಿಸಲಾಗಿತ್ತು. ಸೂಕ್ತ ಪಾಲನೆ, ಪೋಷಣೆ ಇಲ್ಲದೇ ಇವುಗಳಲ್ಲಿ ಹಲವು ಸಸ್ಯಗಳು ಕಣ್ಮರೆಯಾಗಿವೆ. ಕೆಲವು ದೊಡ್ಡ ಮರಗಳಾಗಿ ಬೆಳೆದು ನಿಂತಿವೆ. ಇಲ್ಲಿ ನವಗ್ರಹ ವನ ಹಾಗೂ ರಾಶಿ ವನ ನಿರ್ಮಿಸಿ, ಯಾವ ರಾಶಿ, ಗ್ರಹಕ್ಕೆ ಯಾವ ಗಿಡಗಳು ಎಂದು ಮಾಹಿತಿ ನೀಡುವ ಫಲಕಗಳನ್ನು ಅಳವಡಿಸಲಾಗಿತ್ತು. ಇವುಗಳಲ್ಲಿ ಕೆಲವು ಕಣ್ಮರೆಯಾಗಿವೆ.
ಇದರ ಪಕ್ಕದಲ್ಲೇ ನಾರಿಹಳ್ಳ ಹರಿಯುತ್ತಾ ಸಾಗುತ್ತದೆ. ಇದರ ಕೂಗಳತೆಯಲ್ಲಿ ಶ್ರೀಗಂಡಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಶ್ರೀಗಂಡಿ ಮಾರೆಮ್ಮ ದೇವಸ್ಥಾನಗಳಿವೆ. ರಾಜ್ಯ ಹೆದ್ದಾರಿ ಪಕ್ಕದಲ್ಲಿ ಪ್ರಕೃತಿ ವೀಕ್ಷಣಾ ಗೋಪುರವನ್ನು ಅರಣ್ಯ ಇಲಾಖೆಯಿಂದ ನಿರ್ಮಿಸಲಾಗಿದೆ. ವೀಕ್ಷಣಾ ಗೋಪುರದ ಮೇಲೆಯೇ ‘ಸೀ ಸಂಡೂರ್ ಇನ್ ಸೆಪ್ಟಂಬರ್’ ಎಂದು ಬರೆಸಲಾಗಿದ್ದು, ಈ ಮಾತು ಈ ಭಾಗದಲ್ಲಿ ಜನಜನಿತವಾಗಿದೆ. ಇದರ ಬಳಿ ಮಹಾತ್ಮ ಗಾಂಧೀಜಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.ಮಳೆಗಾಲ, ಚಳಿಗಾಲದಲ್ಲಿ ವೀಕ್ಷಣಾ ಗೋಪುರ ಮೇಲಿಂದ ಸುತ್ತಲಿನ ಸುಂದರ ಪ್ರಕೃತಿ ವೀಕ್ಷಣೆಗೆ ಪ್ರವಾಸಿಗರು ಬರುತ್ತಾರೆ. ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿದ್ದ ಔಷಧೀಯ ಸಸ್ಯಗಳ ಸಂರಕ್ಷಣಾ ಪ್ರದೇಶದ ಅಭಿವೃದ್ಧಿಗೆ ಮತ್ತು ಈ ಪ್ರದೇಶದಲ್ಲಿ ಜಿಪ್‌ಲೈನ್, ಹೈ ಮತ್ತು ಲೋ ರೋಪ್ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವುದು, ಈ ಪ್ರದೇಶವನ್ನು ಮತ್ತಷ್ಟು ಪ್ರೇಕ್ಷಣೀಯಗೊಳಿಸುವಲ್ಲಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಸಂಡೂರಿನ ಔಷಧೀಯ ಸಸ್ಯಗಳ ಸಂರಕ್ಷಣಾ ಪ್ರದೇಶ ಅಭಿವೃದ್ಧಿ ಜತೆ ಜಿಪ್‌ಲೈನ್, ಹೈ-ಲೋ ರೋಪ್ ಅಳವಡಿಸಲಾಗುವುದು. ಇನ್ನು ಮೂರು ತಿಂಗಳಲ್ಲಿ ಇವುಗಳ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎನ್ನುತ್ತಾರೆ ಸಂಡೂರು ದಕ್ಷಿಣ ವಲಯ ಅರಣ್ಯಾಧಿಕಾರಿ ಡಿ.ಕೆ. ಗಿರೀಶ್ ಕುಮಾರ್.ಸಂಡೂರಿನ ಈ ಪ್ರದೇಶದಲ್ಲಿ ಸ್ವಚ್ಛತೆ, ಸುರಕ್ಷತೆ, ವಾಹನ ನಿಲುಗಡೆಗೆ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಸಂಡೂರಿನ ಚಾರಣ ಶ್ರೀನಿವಾಸ್.