ಭಟ್ಕಳದಲ್ಲಿ ರಾಘವೇಶ್ವರ ಶ್ರೀಗಳ ಸ್ವರ್ಣ ಪಾದುಕೆ ಸಂಚಾರ, ಪೂಜೆ

| Published : Dec 16 2024, 12:49 AM IST

ಸಾರಾಂಶ

ಭವತಾರಣಿ ಸೀಮಾ ಪರಿಷತ್ ವ್ಯಾಪ್ತಿಯ ಕಟಗಾರಕೊಪ್ಪದ ಕೃಷ್ಣ ಭಟ್ಟ ಅವರ ಮನೆಯಲ್ಲಿ ಶ್ರೀಗಳ ಸ್ವರ್ಣ ಪಾದುಕೆಗೆ ಪೂಜೆ ನೆರವೇರಿಸಲಾಯಿತು.

ಭಟ್ಕಳ: ತಾಲೂಕಿನಲ್ಲಿ ರಾಮಚಂದ್ರಾಪುರದ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಸ್ವರ್ಣಪಾದುಕೆ ಸಂಚಾರ ಮತ್ತು ಪೂಜೆ ನಡೆಯಿತು.

ಭವತಾರಣಿ ಸೀಮಾ ಪರಿಷತ್ ವ್ಯಾಪ್ತಿಯ ಕಟಗಾರಕೊಪ್ಪದ ಕೃಷ್ಣ ಭಟ್ಟ ಅವರ ಮನೆಯಲ್ಲಿ ಶ್ರೀಗಳ ಸ್ವರ್ಣ ಪಾದುಕೆಗೆ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಿತ್ರೆ ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಹೊನ್ನಾವರ ಹವ್ಯಕ ವಲಯದ ಕಾರ್ಯದರ್ಶಿ ವಿನಾಯಕ ಭಟ್ಟ ಬೆಟ್ಕೂರು, ಶ್ರೀಗಳ ಸ್ವರ್ಣ ಪಾದುಕಾ ಪೂಜೆಗೆ ಭಕ್ತರು ಆಸಕ್ತಿ ವಹಿಸುತ್ತಿದ್ದಾರೆ. ಎಲ್ಲ ಮನೆಗಳಿಗೂ ಶ್ರೀಗಳು ಆಗಮಿಸಲು ಕಷ್ಟಸಾಧ್ಯವಾದ್ದರಿಂದ ಅವರ ಸ್ವರ್ಣಪಾದುಕೆ ಕರೆಯಿಸಿ ಪೂಜಿಸುವ ಪದ್ಧತಿ ಕಳೆದ ಎರಡು ವರ್ಷಗಳಿಂದ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ.

ಮನೆ ಮನೆಗಳಲ್ಲಿ ಆಚಾರ, ವಿಚಾರ, ಸಂಸ್ಕಾರ ಉಳಿಸಿ ಬೆಳೆಸುವ ಉದ್ದೇಶದಿಂದ ಸ್ವರ್ಣಪಾದುಕೆ ಸಂಚಾರ ನಡೆಯುತ್ತಿದೆ. ಪ್ರತಿಯೊಬ್ಬರೂ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಉಳಿಸಿಕೊಳ್ಳಬೇಕು. ಮಕ್ಕಳಿಗೆ ಸಂಸ್ಕಾರಗಳನ್ನು ಕಲಿಸುವ ಕೆಲಸ ಪ್ರತಿ ಮನೆಗಳಲ್ಲಿಯೂ ಆಗಬೇಕು ಎಂದರು.

ವಿನಾಯಕ ಹೆಗಡೆ ಪಾದುಕಾ ಪೂಜೆ ಕೈಂಕರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಭವತಾರಿಣಿ ಸೀಮಾ ಪರಿಷತ್ ಅಧ್ಯಕ್ಷ ವಿನಾಯಕ ಭಟ್ಟ ತೆಕ್ಕನಗದ್ದೆ, ಮಾರುಕೇರಿ ಸೊಸೈಟಿ ಅಧ್ಯಕ್ಷ ಶಿವಾನಂದ ಹೆಬ್ಬಾರ, ಪ್ರಮುಖರಾದ ಗಣೇಶ ಉಪಾಧ್ಯಾಯ, ಗಣೇಶ ಹೆಬ್ಬಾರ, ಗಣೇಶ ಭಟ್ಟ, ಶ್ರೀಧರ ಭಟ್ಟ, ಯೋಗೇಶ ಹೆಬ್ಬಾರ, ನಾಗರಾಜ ಹೆಬ್ಬಾರ ಮುಂತಾದವರಿದ್ದರು.

ತಾಲೂಕಿನ ಹಾಡವಳ್ಳಿಯ ಅಗ್ಗದ ಲಕ್ಷ್ಮೀನಾರಾಯಣ ಉಪಾಧ್ಯಾಯರ ಮನೆಯಲ್ಲೂ ಶ್ರೀಗಳ ಸ್ವರ್ಣ ಪಾದುಕೆ ಪೂಜೆ ನೆರವೇರಿತು. ಕಡವಿನಕಟ್ಟೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಸ್ವರ್ಣಪಾದುಕೆಗೆ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಅರ್ಚಕರು,ಕಾರ್ಯದರ್ಶಿ ಪ್ರಕಾಶ ಭಟ್ಟ, ಪ್ರಮುಖರು ಇದ್ದರು. ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಹಳಿಯಾಳ: ಬೇರೆಡೆ ನಡೆಯುವ ಸಾಹಿತ್ಯ ಸಮ್ಮೇಳನಗಳಿಗಿಂತ ಹಳಿಯಾಳದಲ್ಲಿ ಸಮ್ಮೇಳನ ವಿಭಿನ್ನವಾಗಿ, ವಿಶಿಷ್ಟವಾಗಿ ನಡೆಯಲಿ, ತನ್ಮೂಲಕ ಕನ್ನಡ ಕಂಪು ಪಸರಿಸುವ ಕಾರ್ಯವು ಯಶಸ್ವಿಯಾಗಿ ನಡೆಯಲಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹಾರೈಸಿದರು.ಶನಿವಾರ ಸಂಜೆ ತಮ್ಮ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಪದಾಧಿಕಾರಿಗಳು ಹಾಗೂ ಶಿಕ್ಷಕರೊಂದಿಗೆ ಸೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.ಕಸಾಪ ತಾಲೂಕು ಅಧ್ಯಕ್ಷೆಯಾಗಿರುವ ಸುಮಂಗಲಾ ಅಂಗಡಿ ಅವರ ಮುಂದಾಳತ್ವದಲ್ಲಿ ಡಿ. 26ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ. ಇದು ಕನ್ನಡಿಗರ ಕಾರ್ಯಕ್ರಮವಾಗಿದ್ದರಿಂದ ಎಲ್ಲರೂ ಈ ಸಮ್ಮೇಳನದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿ ಮತ್ತು ಫಲಪ್ರದಗೊಳಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಜಿಲ್ಲಾ ಪದಾಧಿಕಾರಿಗಳಾದ ಸಿದ್ದಪ್ಪ ಬಿರಾದಾರ, ಕಾರ್ಯದರ್ಶಿ ಶಾಂತಾರಾಮ ಚಿಬುಲಕರ, ಬಸವರಾಜ ಇಟಗಿ, ವಿಠ್ಠಲ ಕೋರ್ವೆಕರ, ಗೋಪಾಲ ಅರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.