ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಐದನೇ ದಿನ ಮಂಗಳವಾರ ನಗರದ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜು ಕೊಳದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಮಂಗಳೂರಿನವರೇ ಆದ ರಾಷ್ಟ್ರೀಯ ಈಜು ಚಾಂಪ್ಯನ್ ಚಿಂತನ್ ಎಸ್.ಶೆಟ್ಟಿ ಅವರು ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ.
15ರಿಂದ 35 ವರ್ಷದೊಳಗಿನ ಪುರುಷರ ವಿಭಾಗದಲ್ಲಿ 200 ಮೀಟರ್ ಫ್ರೀಸ್ಟೈಲ್, 100 ಮೀಟರ್ ಫ್ರೀಸ್ಟೈಲ್ ಹಾಗೂ 50 ಮೀಟರ್ ಬಟರ್‌ಫ್ಲೈನಲ್ಲಿ ಮಂಗಳೂರು ಲಕ್ಷಣ್ ಅಕಾಡೆಮಿಯ ಚಿಂತನ್ ಎಸ್.ಶೆಟ್ಟಿ ಚಿನ್ನದ ಪದಕ ಗಳಿಸಿದರು.200 ಮೀಟರ್ ಫ್ರೀಸ್ಟೈಲ್‌ನಲ್ಲಿ ಚೇತನ್ ಎಸ್.ಶೆಟ್ಟಿ 2 ನಿಮಿಷ 00.90 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಪಡೆದರು. ವಿಜಯನಗರ್ ಅಕ್ವಟಿಕ್ ಸೆಂಟರ್‌ನ ಧೋನೇಶ್ ಅವರು 2 ನಿಮಿಷ 0.3.47 ಸೆಕೆಂಡ್ ಕ್ರಮಿಸಿ ಬೆಳ್ಳಿ ಹಾಗೂ ಮಂಗಳೂರು ತಂಡ ಅಲಿಸ್ಟರ್ ಸ್ಯಾಮ್ಯುವೆಲ್ ರೋಗೋ ಅವರು 2 ನಿಮಿಷ 03.59 ಸೆಕೆಂಡ್‌ಗಳಲ್ಲಿ ಕ್ರಮಿಸಿ ಕಂಚಿನ ಪದಕ ಪಡೆದರು.
100 ಮೀಟರ್ ಫ್ರೀಸ್ಟೈಲ್‌ನಲ್ಲಿ ಚೇತನ್ ಎಸ್.ಶೆಟ್ಟಿ ಅವರು 54.74 ಸೆಕೆಂಡ್‌ನಲ್ಲಿ ಕ್ರಮಿಸಿ ಚಿನ್ನ ಪಡೆದರು. ವಿಜಯನಗರ್ ಅಕ್ವಟಿಕ್ ಸೆಂಟರ್‌ನ ಧೋನೇಶ್ 56.86 ಸೆಕೆಂಡ್ ಕ್ರಮಿಸಿ ಬೆಳ್ಳಿ ಹಾಗೂ ಪುತ್ತೂರು ಅಕ್ವಟಿಕ್ ಕ್ಲಬ್‌ನ ಅನ್ವಿತ್ ರೈ ಅವರು 57.76 ಸೆಕೆಂಡ್‌ನಲ್ಲಿ ಕ್ರಮಿಸಿ ಕಂಚಿನ ಪದಕ ಪಡೆದರು.50 ಮೀಟರ್ ಬಟರ್‌ಫ್ಲೈನಲ್ಲಿ ಚಿಂತನ್ ಶೆಟ್ಟಿ ಅವರು 26.18 ಸೆಕೆಂಡ್ ಕ್ರಮಿಸಿ ಚಿನ್ನ, ಪುತ್ತೂರು ಅಕ್ವಟಿಕ್ ಕ್ಲಬ್‌ನ ಅನ್ವಿತ್ ರೈ 27.28 ಸೆಕೆಂಡ್‌ನಲ್ಲಿ ಕ್ರಮಿಸಿ ಬೆಳ್ಳಿ ಹಾಗೂ ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ಗ್ಯಾನ್ 28.03 ಸೆಕೆಂಡ್ ಕ್ರಮಿಸಿ ಕಂಚಿನ ಪದಕ ಪಡೆದರು.
ಮಹಿಳಾ ವಿಭಾಗದಲ್ಲಿ ಬಟರ್‌ಫ್ಲೈನಲ್ಲಿ ಮಂಗಳೂರು ತಂಡದ ಎಸ್.ಆರ್.ರಚನಾ ರಾವ್ ಅವರು 33.06 ಸೆಕೆಂಡ್ ಕ್ರಮಿಸಿ ಚಿನ್ನ, ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ಪೂರ್ವಿ 34.59 ಸೆಕೆಂಡ್ ಕ್ರಮಿಸಿ ಬೆಳ್ಳಿ ಹಾಗೂ ಎಲೈಟ್ ಸ್ಪೋರ್ಟ್ಸ್ ಅಕಾಡೆಮಿಯ ಕೃತಿಕಾ 38.19 ಸೆಕೆಂಡ್ ಕ್ರಮಿಸಿ ಕಂಚಿನ ಪದಕ ಗಳಿಸಿದರು. ಫುಟ್ಬಾಲ್ ಫೈನಲ್:ನಗರದ ನೆಹರೂ ಮೈದಾನದಲ್ಲಿ ನಡೆದ ಫುಟ್‌ಬಾಲ್ ಪಂದ್ಯದ ಫೈನಲ್‌ನಲ್ಲಿ ಮಂಗಳೂರು ಸ್ಪೋರ್ಟಿಂಗ್ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 4-1 ಗೋಲು ಪಡೆದು ಚಿನ್ನ ಗೆದ್ದುಕೊಂಡಿತು. ಮಂಗಳೂರು ಸ್ಪೋರ್ಟಿಂಗ್ ಮತ್ತು ಕಸಬಾ ಬ್ರದರ್ಸ್ ನಡುವೆ ಫೈನಲ್ ಪಂದ್ಯ ನಡೆಯಿತು.