ಕನ್ನಡಪ್ರಭ ವಾರ್ತೆ ಬೆಳಗಾವಿ
ಹಲವು ದಶಕಗಳ ಹಿಂದೆ ಈಜು ಪ್ರವೃತ್ತಿ ಕೇವಲ ಮನರಂಜನೆ ಹಾಗೂ ವೈಯಕ್ತಿಕ ವಿನೋದಕ್ಕಾಗಿ ಮಾತ್ರ ಎನ್ನುವುದು ಪ್ರಸಿದ್ಧವಾಗಿದ್ದು, ಪ್ರಸ್ತುತದಲ್ಲಿ ಈಜು ಒಂದು ಸ್ಪರ್ಧೆ ಹಾಗೂ ಸದೃಢ ದೇಹ, ಮನಸ್ಸಿನ ಆರೋಗ್ಯಕ್ಕೆ ಭದ್ರಬುನಾದಿ ಎಂದು ಎನ್‌ಐಎಸ್ ಈಜು ತರಬೇತುದಾರ ವಿಶ್ವಾಸ ಪವಾರ ಹೇಳಿದರು.ನಗರದ ದಿ ಹಿಂದ್ ಸೊಸಿಯಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸೋಮವಾರ ನಡೆದ ಬೇಸಿಗೆ ಶಿಬಿರದ ಮೊದಲ ದಿನ ಗಂಗಾಪೂಜೆ ನೆರವೇರಿಸಿ ಮಕ್ಕಳು ಹಾಗೂ ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಜು ಕಲಿಯುವ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲಿದ್ದು, ತನ್ನ ನೆರೆಯವರಿಗೂ ಆತ್ಮಬಲ ತುಂಬು ಶಕ್ತಿಯೂ ಆಗಿದೆ. ಪ್ರಾಚೀನ ಕಾಲದಿಂದಲೂ ಜನರು ಈಜು ವಿದ್ಯೆಯನ್ನು ರೂಢಿಗತ ಮಾಡಿಕೊಂಡು ಬಂದಿದ್ದು, ಈಜು ಕೇವಲ ವಿನೋದಕ್ಕಾಗಿ ಅಲ್ಲದೇ ಸದೃಢ ದೇಹ ಹಾಗೂ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈಜು ತರಬೇತಿ ಪಡೆದುಕೊಳ್ಳುವುದು ಕೇವಲ ನೀರಿನಲ್ಲಿ ಮಜಾ ಮಾಡುವುದಲ್ಲ. ಅದೊಂದು ಜೀವ ರಕ್ಷಕ ವಿದ್ಯೆ. ಈಜು ಕಲಿಯುವುದರಿಂದ ಶ್ವಾಶಕೋಶ ಸೇರಿದಂತೆ ತೊಳುಗಳು, ತೊಡೆಸ್ನಾಯುಗಳ ಬಲವನ್ನು ವೃದ್ಧಿಸಿ ಸಂದೃಢ ದೇಹಕ್ಕೆ ಭದ್ರ ಅಡಿಪಾಯ ಹಾಕಿಕೊಡುತ್ತದೆ ಎಂದು ವಿವರಿಸಿದರು.೧೮೨೮ರಲ್ಲಿ ಮೊತ್ತ ಮೊದಲ ಬಾರಿಗೆ ಒಳಾಂಗಣ ಈಜುಕೊಳ ಸಂತ ಜಾರ್ಜ್ ಬಾತ್ಸ್‌ನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಮುಕ್ತಗೊಳಿಸಿದರೇ, ೧೮೩೦ರ ದಶಕದಲ್ಲಿ ಈಜು ಸ್ಫರ್ಧಾತ್ಮಕ ಮತ್ತು ಮನರಂಜನಾ ಚಟುವಟಿಕೆಯಾಗಿ ಇಂಗ್ಲೆಂಡಿನಲ್ಲಿ ಹೊರಹೊಮ್ಮಿತು. ೧೮೩೭ರ ವೇಳೆಗಾಗಲೇ ರಾಷ್ಟ್ರೀಯ ಈಜು ಸೊಸೈಟಿ ಈಜು ಸ್ಪರ್ಧೆಗಳನ್ನು ಲಂಡನ್ ಸುತ್ತ-ಮುತ್ತ ತಾನು ಕಟ್ಟಿದ 6 ಕೃತಕ ಈಜುಕೊಳಗಳಲ್ಲಿ ನಡೆಸಿಕೊಂಡು ಬರುತ್ತಿತ್ತು. ೧೮೮೦ರಲ್ಲಿ ಮೊತ್ತ ಮೊದಲ ರಾಷ್ಟ್ರೀಯ ನಿಯಂತ್ರಣ ಮಂಡಳಿಯಾದ ಹವ್ಯಾಸಿ ಈಜುಗಾರರ ಸಂಘಟನೆ ಹುಟ್ಟಿಕೊಳ್ಳುವ ಸಮಯಕ್ಕೆ ಸುಮಾರು ೩೦೦ ಪ್ರಾದೇಶಿಕ ಗುಂಪುಗಳು ಇಂಗ್ಲೆಂಡಿನ ತುಂಬೆಲ್ಲ ಹುಟ್ಟಿಕೊಂಡಿದ್ದವು ಎಂದರೇ ಅದರ ಪ್ರಭಾವ ಎಷ್ಟು ಬೀರಿತ್ತು ಎಂದು ತಿಳಿದುಕೊಳ್ಳಬಹುದು ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಹಿಂದ್ ಸೊಸಿಯಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಅರವಿಂದ ಸಂಗೊಳ್ಳಿ, ನಿರ್ದೇಶಕ ರಾಜೇಂದ್ರ ಮುಂದಡಾ, ರಾಜಶೇಖರ್ ಹಿರೇಮಠ, ಶ್ರೀಧರ ದೇಶಪಾಂಡೆ, ಕಿಶೋರ ಪಾಟೀಲ, ಜ್ಯೋತಿ ಪವಾರ ಸೇರಿದಂತೆ ಮುದ್ದು ಮಕ್ಕಳು ಹಾಗೂ ಪಾಲಕರು, ಈಜು ತರಬೇತಿದಾರರು ಉಪಸ್ಥಿತರಿದ್ದರು.ಈಜು ಕೇವಲ ಕೈ-ಕಾಲು ಬಳಸಿಕೊಂಡು ನೀರಿನಲ್ಲಿ ದೇಹ ಚಲಿಸುವಂತೆ ಮಾಡುವ ವಿದ್ಯೆ ಎಂತಾದರೂ ಸದ್ಯ ಒಲಿಂಪಿಕ್ ಕ್ರೀಡಾಕೂಟದ ಕ್ರೀಡೆಗಳಲ್ಲೆಲ್ಲ ಸುಪ್ರಸಿದ್ಧವಾದ ಕ್ರೀಡೆಗಳಲ್ಲಿ ಈಜು ಕೂಡ ಒಂದಾಗಿದೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ವತಂತ್ರ ವರಸೆ, ಚಿಟ್ಟೆ ವರಸೆ, ಎದೆ ವರಸೆ, ಬೆನ್ನಿನ ವರಸೆ ಮತ್ತು ವೈಯಕ್ತಿಕ ಮಿಶ್ರವರಸೆ ಮುಂತಾದ ಪ್ರಕಾರಗಳಿವೆ. ಒಂದೊಂದು ಶೈಲಿಯ ಈಜಿಗೆ ತನ್ನದೇ ಆದ ವಿಶೇಷ ಕೌಶಲ್ಯದ ಅವಶ್ಯಕತೆ ಇರುತ್ತದೆ ಮತ್ತು ಸ್ಫರ್ಧೆಗಳಲ್ಲಿ ಪ್ರತಿ ಶೈಲಿ ಒಪ್ಪಿಕೊಳ್ಳಲು ವಿಶೇಷವಾದ ಮಾನದಂಡಗಳಿರುತ್ತವೆ. ಹೀಗಾಗಿ ಬಾಲ್ಯದಲ್ಲಿಯೇ ಮಕ್ಕಳಿಗೆ ಈಜು ತರಬೇತಿ ಕೊಡಿಸಬೇಕು.
-ವಿಶ್ವಾಸ ಪವಾರ, ಎನ್‌ಐಎಸ್ ಈಜು ತರಬೇತುದಾರರು.