ಸಾರಾಂಶ
ಧಾರವಾಡ:
ಶಾಲಾ ಮಕ್ಕಳಲ್ಲಿ ಗಣಿತ ವಿಷಯದಲ್ಲಿ ಕಲಿಕಾಸಕ್ತಿ ಮೂಡಿಸಲು ವಿಚಾರ ಸಂಕಿರಣಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ಹೇಳಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಶನ್ ಜಂಟಿಯಾಗಿ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಆಯೋಜಿಸಿದ್ದ ಗಣಿತ ಕಲಿಕೆ ಕುರಿತು ಜಿಲ್ಲಾಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಗಣಿತ ಸೇರಿದಂತೆ ಯಾವುದೇ ವಿಷಯಗಳು ಕಠಿಣ ಅಲ್ಲ. ನಿರಂತರ ಓದು, ಪ್ರಯತ್ನದಿಂದ ಎಲ್ಲ ವಿಷಯ ಅರಿಯಬಹುದು ಎಂಬುದನ್ನು ಮಕ್ಕಳಿಗೆ ಶಿಕ್ಷಕರು ಮನನ ಮಾಡಿಕೊಡಬೇಕು. ಮಕ್ಕಳಲ್ಲಿ ಮೊದಲು ಶಿಕ್ಷಣದ ಧೈರ್ಯ ತುಂಬಿದರೆ ಯಾವುದೇ ಭಯವಿಲ್ಲದೇ ಪಾಠ ಕಲಿಯಲು ಸಹಾಯವಾಗುತ್ತದೆ ಎಂದರು.
ಅಕ್ಷರ ಫೌಂಡೇಶನ್ ವಿಭಾಗೀಯ ವ್ಯವಸ್ಥಾಪಕ ಅಂಜಲೀನಾ ಗ್ರೇಗರಿ, ಶಾಲಾ ಮಟ್ಟದಲ್ಲಿ ಗಣಿತ ವಿಷಯದಲ್ಲಿ ಮಕ್ಕಳಿಗೆ ಗುಣಮಟ್ಟದ ತರಬೇತಿ ನೀಡಲು, ಪ್ರಾಥಮಿಕ ಶಾಲಾ ಮಕ್ಕಳಲ್ಲಿನ ಕಲಿಕೆಯ ಸಾರಾಂಶವನ್ನು ಕಾರ್ಯಗತಗೊಳಿಸಲು ವಿಚಾರ ಸಂಕಿರಣ ನಡೆಸಲಾಗುತ್ತಿದೆ ಎಂದು ಹೇಳಿದರು.ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ, ಗಣಿತವು ಕಬ್ಬಿಣದ ಕಡಲೆ ಅಲ್ಲ, ಅದನ್ನು ಅರ್ಥಯಿಸಿದರೆ ಎಲ್ಲ ವಿಷಯಗಳಿಗಿಂತ ಸುಲಭ ಎಂದರು.
ಶಿಕ್ಷಣ ಇಲಾಖೆಯ ಅಭಿವೃದ್ಧಿಯ ಉಪನಿರ್ದೇಶಕ ಜಯಶ್ರೀ ಕಾರೇಕಾರ, ಪಂಚಾಯಿತಿಗಳು ಶಾಲಾ ಶಿಕ್ಷಣದಲ್ಲಿ ಭಾಗವಹಿಸುವಿಕೆಯಿಂದ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವೆಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಫ್. ಚುಳಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಬಮ್ಮಿಗಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ನಿಂಗಪ್ಪ ಧೂಳಿಕೊಪ್ಪ ಇದ್ದರು.
ಇದೇ ಸಂದರ್ಭದಲ್ಲಿ ಗ್ರಾಪಂ ಮಟ್ಟದ ಗಣಿತ ಸ್ಪರ್ಧೆಗಳ ಧಾರವಾಡ ಜಿಲ್ಲೆ ವರದಿ ಬಿಡುಗಡೆಗೊಳಿಸಲಾಯಿತು. 4,5 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಕಲಿಕಾ ಅಂದೋಲನ, ಸ್ಪರ್ಧೆ ಕೈಗೊಳ್ಳಲಾಗಿತ್ತು. ಉತ್ತಮ ಫಲಿತಾಂಶ ಪಡೆದ ಜಿಲ್ಲೆಯಲ್ಲಿನ 25 ಗ್ರಾಮ ಪಂಚಾಯಿತಿಗಳನ್ನು ಸನ್ಮಾನಿಸಲಾಯಿತು.ಈ ವೇಳೆ ಸಹಾಯಕ ಕಾರ್ಯದರ್ಶಿ ಅಜಯ್ ಎನ್., ನೋಡಲ್ ಅಧಿಕಾರಿ ರಮೇಶ ಯರಳ್ಳಿ ಹಾಗೂ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಆರ್. ಸದಲಗಿ ಇದ್ದರು. ನೋಡಲ್ ಅಧಿಕಾರಿ ಅರುಣ ನವಲೂರ ನಿರೂಪಿಸಿದರು. ರವಿರಾಜ ಬ್ಯಾಹಟ್ಟಿ ಸ್ವಾಗತಿಸಿದರು. ಎಚ್.ಬಿ. ಮಸಾಲಿ ವಂದಿಸಿದರು.