ಸಾರಾಂಶ
ಬೆಂಗಳೂರು : ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ 6 ಕೋಟಿ ರು. ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಸೇರಿದಂತೆ ವಿವಿಧ ಕ್ರೀಡಾ ಸವಲತ್ತುಗಳನ್ನು ಕಲ್ಪಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.ನಗರ ಪೊಲೀಸ್ ವತಿಯಿಂದ ಆಡುಗೋಡಿಯ ಸಿಎಆರ್ ಮೈದಾನದಲ್ಲಿ ನಡೆದ ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2024ರ ಸಮಾರೋಪದಲ್ಲಿ ಭಾಗವಹಿಸಿ, ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಪೊಲೀಸ್ ಕ್ರೀಡಾಪಟುಗಳಿಗೆ ಹಾಗೂ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಈಗಾಗಲೇ ಮೂರು ಕೋಟಿ ರು. ಅನುದಾನ ನೀಡಲಾಗಿದೆ. ಬಜೆಟ್‌ನಲ್ಲಿ ಇನ್ನುಳಿದ ಅನುದಾನವನ್ನು ನೀಡಲಾಗುವುದು. ಸರ್ಕಾರವು ಮುಂದಿನ ದಿನಗಳಲ್ಲಿ ಪೊಲೀಸರಿಗೆ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸುತ್ತದೆ ಎಂದು ಹೇಳಿದರು.
ದೇಶದ ಬೇರೆ ಮಹಾನಗರಗಳ ಪೊಲೀಸರಿಗಿಂತ ಬೆಂಗಳೂರು ನಗರ ಪೊಲೀಸ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ದಕ್ಷತೆ ಮತ್ತು ಪ್ರಾಮಾಣಿಕತೆಯಲ್ಲಿ ಕರ್ನಾಟಕ ಪೊಲೀಸ್ ಎರಡನೇ ಸ್ಥಾನದಲ್ಲಿದೆ ಎಂಬುದನ್ನು ರಾಷ್ಟ್ರಮಟ್ಟದ ಜಾಗರಣಾ ಪತ್ರಿಕೆ ವರದಿ ಮಾಡಿದೆ. ಇದು ಸಂತೋಷ ತಂದಿದೆ. ಆದರೆ, ಕರ್ನಾಟಕ ಪೊಲೀಸ್ ದೇಶದಲ್ಲಿ ಮೊದಲ ಸ್ಥಾನಕ್ಕೆ ಬರಬೇಕು ಎಂದು ಆಸೆ ವ್ಯಕ್ತಪಡಿಸಿದರು.
ಈ ವೇಳೆ ಗೃಹ ಸಚಿವರ ಪತ್ನಿ ಕನ್ನಿಕಾ ಪರಮೇಶ್ವರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.ಉತ್ತಮ ಆರೋಗ್ಯ ಮತ್ತು ದೈಹಿಕ ಸಾಮಾರ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಲಿದೆ. ಮಾನಸಿಕವಾಗಿ ಏಕತೆಯ ಭಾವನೆ ಮೂಡಿಸುತ್ತದೆ. ಕರ್ತವ್ಯದಲ್ಲಿನ ಮಾನಸಿಕ ಒತ್ತಡಗಳನ್ನು ತಡೆಯುವ ಶಕ್ತಿ ಕ್ರೀಡೆಯಿಂದ ಬರುತ್ತದೆ. ಜೀವನದಲ್ಲಿ ಅನೇಕ ಬಾರಿ ಸೋಲು-ಗೆಲುವು ಕಾಣುತ್ತೇವೆ. ಸೋಲನ್ನು ಸ್ವೀಕರಿಸುವ ಶಕ್ತಿ ಕ್ರೀಡೆಯಿಂದ ಬರುತ್ತದೆ. ಸ್ವತಃ ಕ್ರೀಡಾಪಟುವಾಗಿ ಇಂತಹ ಅನುಭವ ಕಂಡಿದ್ದೇನೆ ಎಂದರು.