ಸತ್ಯ, ಶಿಸ್ತು, ಶಾಂತಿ, ಸಂಯಮ, ಸಮಾಧಾನ ಮತ್ತು ಸಹಬಾಳ್ವೆಗೆ ಗಾಂಧೀಜಿಯವರ ಬದುಕು ನಮ್ಮೆಲ್ಲರಿಗೂ ಮಾದರಿ. ಒಬ್ಬ ಗಾಂಧೀಜಿಯನ್ನು ಅರ್ಥಮಾಡಿಕೊಳ್ಳದವರು ಇಂದು ಭಾರತದ ಚಿಕ್ಕ ಮತ್ತು ದೊಡ್ಡ ಸಮಸ್ಯೆಗಳಿಗೆಲ್ಲ ಅವರೇ ಕಾರಣ ಅನ್ನುವಂತೆ ಬಿಂಬಿಸುತ್ತಿದ್ದಾರೆ.

ಕನ್ನಡಪ್ರಭವ ವಾರ್ತೆ ಕೆ.ಆರ್.ಪೇಟೆ

ವಿದ್ಯಾವಂತ, ಬುದ್ಧಿವಂತ, ಪ್ರಜ್ಞಾವಂತರೆಂದು ಕರೆಸಿಕೊಳ್ಳುವ ವರ್ಗದಿಂದಲೇ ತಪ್ಪಾಗಿ ಬಿಂಬಿಸಲ್ಪಡುತ್ತಿರುವ ವ್ಯಕ್ತಿಯೆಂದರೆ ಅದು ಮಹಾತ್ಮ ಗಾಂಧಿ ಎಂದು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಕೆ.ಎನ್.ನಿತ್ಯಾನಂದ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ, ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನ, ಮಂಡ್ಯದ ಕರ್ನಾಟಕ ಸಂಘ, ತಾಲೂಕು ರೈತಸಂಘ, ಸಮಾನ ಮನಸ್ಕರ ವೇದಿಕೆ, ಅಕ್ಕಿಹೆಬ್ಬಾಳು ಲೋಕಾಯನ ಕಲ್ಚರಲ್ ಟ್ರಸ್ಟ್, ದಲಿತ ಶಿಕ್ಷಣ ಅಭಿವೃದ್ದಿ ಸಂಸ್ಥೆ, ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಆಶ್ರಯದಲ್ಲಿ ನಡೆದ ಮಹಾತ್ಮ ಗಾಂಧೀಜಿ ಅವರ ಬದುಕು ಮತ್ತು ಹೋರಾಟ ಕುರಿತ 2 ದಿನಗಳ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸತ್ಯ, ಶಿಸ್ತು, ಶಾಂತಿ, ಸಂಯಮ, ಸಮಾಧಾನ ಮತ್ತು ಸಹಬಾಳ್ವೆಗೆ ಗಾಂಧೀಜಿಯವರ ಬದುಕು ನಮ್ಮೆಲ್ಲರಿಗೂ ಮಾದರಿ. ಒಬ್ಬ ಗಾಂಧೀಜಿಯನ್ನು ಅರ್ಥಮಾಡಿಕೊಳ್ಳದವರು ಇಂದು ಭಾರತದ ಚಿಕ್ಕ ಮತ್ತು ದೊಡ್ಡ ಸಮಸ್ಯೆಗಳಿಗೆಲ್ಲ ಅವರೇ ಕಾರಣ ಅನ್ನುವಂತೆ ಬಿಂಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹಾತ್ಮರನ್ನು ಒಮ್ಮೆ ಮಾತ್ರ ಗುಂಡಿಟ್ಟು ಕೊಲ್ಲಲಾಯಿತು. ಆದರೆ, ಕೆಲವರು ಗಾಂಧೀಜಿ ಬದುಕಿದ್ದಾಗಲೇ ರಾಜಕೀಯ ಕಾರಣಗಳಿಗಾಗಿ ಅವರನ್ನು ಸ್ವಲ್ಪ ಸ್ವಲವೇ ಮುಗಿಸುತ್ತಾ ಬಂದು ಸ್ವಾತಂತ್ರ ಬರುವ ಹೊತ್ತಿಗೆ ಅವರನ್ನು ಏಕಾಂಗಿಯನ್ನಾಗಿ ಮಾಡಿದ್ದರು. ಸ್ವಾತಂತ್ರ್ಯ ನಂತರವೂ ದಿವ್ಯ ಮಾನವ ಗಾಂಧಿ ಚಿಂತನೆಗಳ ಮೇಲೆ ವ್ಯವಸ್ಥಿತ ದಾಳಿ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.

ಜಗತ್ತು ಕಂಡ ಈ ಮಹಾ ಮಾನವನನ್ನು ಕೇವಲ ಪ್ರತಿಮೆಯನ್ನಾಗಿಸಿಕೊಂಡು ರಸ್ತೆಗಳು, ಬಡಾವಣೆಗಳು, ಸರ್ಕಾರಿ ಯೋಜನೆಗಳಿಗೆ ಹೆಸರಿಡಲು ಅಥವಾ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸತ್ಯಾಗ್ರಹ ಮಾಡುವವರ ಮುಂದೆ ಕೇವಲ ಒಂದು ಫೋಟೋವಾಗಿ ಮಾತ್ರ ಬಳಕೆ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.

ಮಾನವ ಕುಲಕ್ಕೆ ತನ್ನ ಬದುಕನ್ನೆ ಆದರ್ಶವನ್ನಾಗಿ ಬಿಟ್ಟು ಹೋದ ಬೆತ್ತಲೆ ಫಕೀರ ನಮ್ಮ ಗಾಂಧಿ. ಗಾಂಧಿ ತತ್ವದಲ್ಲಿ ಸತ್ಯವಿದೆ. ಕ್ರೂರ ಕುತಂತ್ರಗಳನ್ನು ಎದುರಿಸುವ, ಸಂಭಾಳಿಸುವ ಮತ್ತು ಸೋಲಿಸುವ ಶಕ್ತಿ ಗಾಂಧಿ ಚಿಂತನೆಗಳಲ್ಲಿದೆ.ಇವರನ್ನು ಮರೆತರೆ ಭವ್ಯ ಭಾರತ ನಿರ್ಮಾಣದ ಅಡಿಪಾಯವನ್ನು ನಾವೇ ಕಿತ್ತು ಹಾಕಿದಂತೆ ಎಂದು ಎಚ್ಚರಿಸಿದರು.

ಇದೇ ವೇಳೆ ಅತ್ತಿಗುಪ್ಪೆ ಸಾಹಿತ್ಯ ಬಳಗದ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್ ಗಾಂಧೀಜಿಯವರ ಕುಟುಂಬದ ಹಿನ್ನೆಲೆ ಮತ್ತು ಬಾಲ್ಯ ಕುರಿತು, ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಬೆಕ್ಕಳಲೆ ಲೋಕೇಶ್, ದಕ್ಷಿಣ ಅಫ್ರಿಕಾದಲ್ಲಿ ಗಾಂಧಿ ಕುರಿತು ವಿಷಯ ಮಂಡಿಸಿದರು. ಚಿಂತಕ ಜಗದೀಶ್ ಕೊಪ್ಪ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಡುವಿನ ಭಿನ್ನಾಭಿಪ್ರಾಯಗಳನ್ನು ಕುರಿತು ವಿಚಾರ ಮಂಡಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ಅಶ್ವತ್‌ನಾರಾಯಣ ಉದ್ಘಾಟಿಸಿದರು. ಮಾಜಿ ಸ್ಪೀಕರ್ ದಿವಂಗತ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆಹೊಸಹಳ್ಳಿ ಜವರಾಯಿಗೌಡ ಅಧ್ಯಕ್ಷತೆ ವಹಿಸಿದ್ದರು. ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಗಸರಹಳ್ಳಿ ಕೆ.ರೋಹಿತ್, ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಜಗದೀಶ್, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ;ಕೆಂಡಗಣ್ಣೇಗೌಡ, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್.ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ.ರವಿಕುಮಾರ್, ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಸ್ತಿ ರಂಗಪ್ಪ, ಕತ್ತರಘಟ್ಟ ವಾಸು, ಆರ್.ಎಸ್ ಪದ್ಮನಾಭ ಇದ್ದರು.