ತಾಲೂಕಿನ 4 ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ಸಮಯದಲ್ಲಿ ಬಸವನ ಕಟ್ಟೆಗೆ ನೀರು ಬರೋ ತನಕವೇ ಚಾಮರಾಜನಗರ ರೈತರಲ್ಲದವರು ಪ್ರತಿಭಟನೆ ನಡೆಸುವ ಮೂಲಕ ನನ್ನ ವಿರುದ್ಧ ಪೂರ್ವ ನಿಯೋಜಿತ ಸಂಚು ನಡೆಯುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ 4 ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ಸಮಯದಲ್ಲಿ ಬಸವನ ಕಟ್ಟೆಗೆ ನೀರು ಬರೋ ತನಕವೇ ಚಾಮರಾಜನಗರ ರೈತರಲ್ಲದವರು ಪ್ರತಿಭಟನೆ ನಡೆಸುವ ಮೂಲಕ ನನ್ನ ವಿರುದ್ಧ ಪೂರ್ವ ನಿಯೋಜಿತ ಸಂಚು ನಡೆಯುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.ಪಟ್ಟಣದ ತಾಲೂಕು ಕಚೇರಿ ಮುಂದೆ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ಕಾರ್ಯಕರ್ತರು ಕಳೆದ ಆ.24 ರಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಹಿನ್ನೆಲೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿ, ಹುತ್ತೂರಿಂದ ವಡ್ಡಗೆರೆ, ಕರಕಲಮಾದಹಳ್ಳಿ ಕೆರೆಗೆ ನೀರು ಬರೋ ತನಕ ಚಾಮರಾಜನಗರ ರೈತರು ಪ್ರತಿಭಟನೆ ಮಾಡೋದಿಲ್ಲ. ರೈತರ ಹೆಸರಲ್ಲಿ ರೈತರಲ್ಲದವರು ಪ್ರತಿಭಟನೆ ಶುರು ಮಾಡುತ್ತಾರೆ ಎಂದರು.
ಈಗ ಸೆ.5ರ ತನಕ 3 ನೇ ಹಂತದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಸೆ. 6ರಿಂದ 4ನೇ ಹಂತದ ಕೆರೆಗಳಿಗೆ ನೀರು ಹರಿಸಬೇಕಿದೆ ಈ ಸಮಯದಲ್ಲಿ 2 ನೇ ಹಂತದ ರೈತರು ಪ್ರತಿಭಟನೆಗೆ ತಯಾರು ನಡೆಸುತ್ತಿದ್ದಾರೆ ಎಂದು ದೂರಿದರು.ಗ್ರಾವೀಟೀಲಿ ನೀರು ತುಂಬಲ್ಲ:
ಮಹದೇವಪ್ರಸಾದ್ ಸಚಿವರಾಗಿದ್ದ ಸಮಯದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್‌ನಿಂದ ಸಾಧ್ಯ ಎಂದು ಮನಗಂಡು ಪೈಪ್ ಲೈನ್ ಮಾಡಿಸಲು ಮುಂದಾಗಿದ್ದರು. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟರು ಕೂಡ ಪೈಪ್ ಲೈನ್‌ಗೆ ಸಾಥ್ ನೀಡಿದ್ದರು ಎಂದು ಹಳೆಯದನ್ನು ಮೆಲುಕು ಹಾಕಿದರು.ಕೆರೆ ನೀರು ತುಂಬಿಸುವ ವಿಚಾರದಲ್ಲಿ ನನಗೆ ಹಿಂಸೆ:
ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ನನ್ನ ವೈಪಲ್ಯ ಎನ್ನುವುದು ನೂರಲ್ಲ, ಸಾವಿರ ಪಟ್ಟು ಸುಳ್ಳು ಎಂದು ಎಂದು ಶಾಸಕ ಗಣೇಶ್ ಪ್ರಸಾದ್ ಸ್ಪಷ್ಟಪಡಿಸಿದರು.ಕೆರೆ ನೀರು ತುಂಬಿಸುವ ವಿಚಾರದಲ್ಲಿ ನನಗೆ ಹಿಂಸೆ ಆಗುತ್ತಿದೆ. ಕೆರೆ ನೀರು ತುಂಬಿಸುವ ವಿಚಾರದಲ್ಲಿ ವೈಪಲ್ಯ ಆಗುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ ಎಂದರು.
ಪ್ರತಿಭಟನೆ ಕೈ ಬಿಡಿ, ನಾನು ನಿಮ್ಮ ಜೊತೆ ಇದ್ದೇನೆ. ಕೆರೆಗೆ ನೀರು ತುಂಬಿಸುವ ಕೆಲಸ ಮಾಡುತ್ತೇನೆ. ಸಾಗುವಳಿ ಹಕ್ಕು ಪತ್ರ ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.ಪ್ರತಿಭಟನೆ ನಿಲ್ಲಲ್ಲ, ಡಿಸಿ ಬರಬೇಕು
ಶಾಸಕರು ಭರವಸೆ ಕೊಟ್ಟ ತಕ್ಷಣ ಪ್ರತಿಭಟನೆ ನಿಲ್ಲಲ್ಲ. ಪ್ರತಿಭಟನೆ ಅಹೋರಾತ್ರಿ ನಡೆಯುತ್ತದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು.ಶಾಸಕರ ಮಾತು ಅಧಿಕಾರಿಗಳು ಕೇಳೋಲ್ಲ. ಕೂಡಲೇ ಜಿಲ್ಲಾಧಿಕಾರಿ ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಳೊಂದಿಗೆ ಬರಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ, ತಾಲೂಕು ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ರಘು, ಮುಖಂಡರಾದ ಪ್ರಸಾದ್, ನಾಗರಾಜಪ್ಪ ಹಲವರು ಇದ್ದರು.