ಕ್ರಮಬದ್ಧ ಅಧ್ಯಯನ ಗುರಿ ಸಾಧನೆಗೆ ಸಹಕಾರಿ

| Published : Oct 20 2025, 01:03 AM IST

ಸಾರಾಂಶ

ಪದವಿ ಹಂತದಲ್ಲಿಯೇ ಹೆಚ್ಚಿನ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಸೂಕ್ತವಾಗಿದೆ

ಯಲಬುರ್ಗಾ: ಕ್ರಮಬದ್ಧ ಅಧ್ಯಯನದಿಂದ ಮಾತ್ರ ಗುರಿ ಸಾಧನೆಗೆ ಸಹಕಾರಿಯಾಗಲಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಧೀರ ಕೊರ್ಲಹಳ್ಳಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು.

ನಿರಂತರ ಪರಿಶ್ರಮದಿಂದ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಿದೆ. ಪದವಿ ಹಂತದಲ್ಲಿಯೇ ಹೆಚ್ಚಿನ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಸೂಕ್ತವಾಗಿದೆ. ಇದರಿಂದ ಗುರಿ ಸಾಧಿಸಿ ಉನ್ನತ ಸ್ಥಾನಮಾನ ಕಂಡುಕೊಳ್ಳಲು ಸಾಧ್ಯವಿದೆ.ವಿಶೇಷ ಜ್ಞಾನ ಮತ್ತು ಕೌಶಲ್ಯಗಳು ಅಗತ್ಯವಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಯೋಜನೆ ಜಾರಿಗೊಳಿಸಿದ್ದು, ಅವುಗಳ ಸದುಪಯೋಗವಾಗಬೇಕು ಎಂದರು.

ಪ್ರಾಚಾರ್ಯ ಕೆ.ಎಚ್. ಛತ್ರದ ಮಾತನಾಡಿ, ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಯಶಸ್ಸು ಕಾಣಬಹುದು. ಪದವಿ ಶಿಕ್ಷಣ ಪೂರ್ಣಗೊಳಿಸಿದ ಕೂಡಲೇ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಸುಲಭವಾಗಿ ಎದುರಿಸಿ ಯಶಸ್ಸು ಸಾಧಿಸಲು ಕಾಲೇಜಿನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಗತಿ ಆಯೋಜಿಸಲಾಗುತ್ತಿದೆ. ಓದುವ ಕೊಠಡಿ ತೆರೆಯಲಾಗಿದ್ದು, ವಿವಿಧ ಭಾಷೆಯ ಸಾಕಷ್ಟು ಸಂಖ್ಯೆಯ ಪುಸ್ತಕ ಪೂರೈಸಲಾಗುತ್ತಿದೆ. ಸಂಶೋಧನೆಗೆ ಬೇಕಾದ ಶೈಕ್ಷಣಿಕ ಪಠ್ಯಪುಸ್ತಕ ಕಾಲೇಜಿನಲ್ಲಿ ದೊರೆಯುತ್ತಿವೆ ಎಂದರು.

ಜನಪದ ಕಲಾವಿದ ಜೀವನ್‌ಸಾಬ್ ಬಿನ್ನಾಳ ವಿಶೇಷ ಉಪನ್ಯಾಸ ನೀಡಿದರು. ಸಹಾಯಕ ಪ್ರಾಧ್ಯಾಪಕ ಎ.ಬಿ. ಕೆಂಚರಡ್ಡಿ ಮಾತನಾಡಿದರು.

ಈ ಸಂದರ್ಭ ಸಿಡಿಸಿ ಸಮಿತಿ ಸದಸ್ಯ ವಿರೂಪಾಕ್ಷಯ್ಯ ಗಂಧದ, ರೆಹಮಾನ್‌ಸಾಬ್ ನಾಯಕ, ವಿಕಾಸಗೌಡ ಉಳ್ಳಾಗಡ್ಡಿ, ಬಸವರಾಜ ಒಂಟೆಲಿ, ಲಿಂಗರಾಜ ಪಾಟೀಲ್, ಕಳಕಪ್ಪ ಸೂಡಿ, ಜಯಶ್ರೀ ಕಂದಕೂರ, ಐಕ್ಯೂಎಸಿ ಸಂಚಾಲಕ ಸುರೇಶಕುಮಾರ ಸೊನ್ನದ, ರೆಡ್‌ಕ್ರಾಸ್ ಸಂಚಾಲಕಿ ನಂದಾ, ರೂಪಾ ಸಂಚಾಲಕ ವಿನೋಧ ಸಿದ್ದಣ್ಣವರ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಶಂಕ್ರಯ್ಯ, ರೋವರ್ಸ್ ಸಂಚಾಲಕ ಹನುಮೇಶ, ರೇಂಜರ್ಸ್ ಸಂಚಾಲಕಿ ಲಕ್ಷ್ಮೀಬಾಯಿ, ಎನ್‌ಸಿಸಿ ಮತ್ತು ಕ್ರೀಡಾ ಸಂಚಾಲಕ ವಂಶಿಕೃಷ್ಣ, ಸಿಬ್ಬಂದಿ ಶಿವಲೀಲಾ ಯಾವಗಲ್ಲಮಠ‌ ಸೇರಿದಂತೆ ಇತರರು ಇದ್ದರು.