ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ವಿದ್ಯಾರ್ಥಿಗಳಲ್ಲಿ ಸಂಕುಚಿತ, ಕೀಳರಿಮೆ ಭಾವನೆಯನ್ನು ಹೋಗಲಾಡಿಸಲು ಹಾಗೂ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶಿಸಲು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದು ಬಿಇಒ ಮಹೇಶ್ ಹೇಳಿದರು.ಭಾನುವಾರ ಟಿ.ಎ.ಪಿ.ಸಿ.ಎಂ.ಎಸ್ ಆವರಣದ ಶ್ರೀಗುರು ವಿದ್ಯಾ ವಿಕಾಸ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸಬೇಕು. ಆಗಲೇ ಪರಿಪೂರ್ಣ ಶಿಕ್ಷಣ ದೊರಕಲು ಸಾಧ್ಯ. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ವೇದಿಕೆ ಕಲ್ಪಿಸಿ ಪ್ರೋತ್ಸಾಹ ನೀಡುವ ಮೂಲಕ ಸಾಧನೆಗೆ ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಕೂಡ ಸಂಕುಚಿತ ಕೀಳರಿಮೆ ಮನೋಭಾವನೆಯನ್ನು ಬಿಟ್ಟು, ಪ್ರಮುಖವಾಗಿ ಮೊಬೈಲ್ ಬಳಕೆಯಿಂದ ದೂರವಿದ್ದು ಸಮಯ ಪಾಲನೆ, ಶಿಸ್ತು, ಕಠಿಣ ಪರಿಶ್ರಮದಿಂದ ಉತ್ತಮ ಗುರಿಯನ್ನು ಹೊಂದಿ ಸಾಧನೆಗೆ ಮುಂದಾಗಬೇಕು. ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡಾ ಚಟುವಟಿಕೆಯಲ್ಲೂ ಭಾಗವಹಿಸಬೇಕು ಎಂದು ಅವರು ಸಲಹೆ ನೀಡಿದರು.ನಗರಸಭಾ ಸದಸ್ಯ ಮಹೇಶ್ ಅತ್ತಿಖಾನೆ ಮಾತನಾಡಿ, ಸಾಧನೆ ಬರೀ ಶ್ರೀಮಂತರಿಗೆ ಮಾತ್ರ ಸೀಮಿತವಾಗಿಲ್ಲ. ಬಡತನ ಸಾಧನೆಗೆ ದಾರಿಯಾಗಲಿದೆ. ಪೋಷಕರು ಕೇವಲ ಅಂಕಗಳಿಕೆಗಾಗಿ ಮಕ್ಕಳ ಮೇಲೆ ಒತ್ತಡ ಹೇರಬಾರದು, ನಿಮ್ಮ ಮಕ್ಕಳು ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ತಿಳಿದು, ಪ್ರೋತ್ಸಾಹ ನೀಡಿದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸದಿಂದ ಸಾಧನೆಗೆ ಮುಂದಾಗುತ್ತಾರೆ ಎಂಬುದಕ್ಕೆ ರಾಷ್ಟ್ರೀಯ ಖೋಖೋ ಆಟಗಾರ್ತಿ ಚೈತ್ರಾ ಸ್ಪಷ್ಟ ನಿದರ್ಶನ. ಗುರು ವಿದ್ಯಾ ವಿಕಾಸ ಸಂಸ್ಥೆಯು ಕಡಿಮೆ ಶುಲ್ಕ ಪಡೆದು ಬಡವರ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಖೋಖೋ ಆಟಗಾರ್ತಿ ಚೈತ್ರಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಪಂದ್ಯಾವಳಿಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಅಧ್ಯಕ್ಷ ಸೋಮಶೇಖರ ಸ್ವಾಮೀಜಿ ಆಶೀರ್ವಚನ ನೀಡಿದರು.ಸಮಾರಂಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೋಮಶೇಖರ್, ಮುಖ್ಯ ಶಿಕ್ಷಕರಾದ ರಾಜಪ್ಪ, ಸಹ ಶಿಕ್ಷಕರಾದ ಚಂದ್ರಶೇಖರ್, ಮಹದೇವಸ್ವಾಮಿ, ಕುಮಾರಸ್ವಾಮಿ, ಸೇರಿದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದ್ದರು.