ತಾಲೂಕು ಪಂಚಾಯತಿಯಲ್ಲಿ ಅತಿ ವೃಷ್ಠಿ, ಅನಾವೃಷ್ಠಿಗೆ ಕುರಿತ ಮುಂಜಾಗ್ರತಾ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮುಂದಿನ 3 ತಿಂಗಳು ಎಲ್ಲಾ ಅಧಿಕಾರಿಗಳು ಕಟ್ಟೆಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಸೂಚಿಸಿದರು.

ಶುಕ್ರವಾರ ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ಅತಿವೃಷ್ಟಿ, ಅನಾವೃಷ್ಟಿ ಮುಂಜಾಗ್ರತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲಾಖಾ ಅಧಿಕಾರಿಗಳು ತಮ್ಮ ಹಂತದಲ್ಲೇ ಬಗೆಹರಿಸಬಹುದಾದ ಸಮಸ್ಯೆ ಕೂಡಲೇ ಬಗೆಹರಿಸಬೇಕು. ತಮ್ಮ ಹಂತದಲ್ಲಿ ಬಗೆಹರಿಸಲಾಗದಂತಹ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಮಳೆಗಾಲದಲ್ಲಿ ಕೆಲವು ತುರ್ತು ಕಾಮಗಾರಿ ನಿರ್ವಹಣೆ, ಸಮಸ್ಯೆಗಳ ಪರಿಹಾರಕ್ಕೆ ನನ್ನ ಅನುಮತಿ ಅವಶ್ಯಕತೆ ಇದೆ. ನಾನು ದೂರವಾಣಿ ಸಂಪರ್ಕಕ್ಕೆ ಸಿಗದೇ ಇದ್ದರೆ ಯಾವುದೇ ಅನುಮತಿ, ಅನುದಾನಕ್ಕೆ ಕಾಯದೆ ಸಮಸ್ಯೆ ಬಗೆಹರಿಸಲು ಕ್ರಮವಹಿಸಿ ನಂತರ ಅನುಮತಿ, ಪ್ರಸ್ತಾವನೆ ಪ್ರಕ್ರಿಯೆ ಮಾಡಬೇಕು ಎಂದು ಹೇಳಿದರು.

ಹಿಂದಿನ ಸಾಲಿನಲ್ಲಿ ಅತಿವೃಷ್ಟಿ, ಅನಾವೃಷ್ಟಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ, ಯಶಸ್ವಿ ಯಾಗಿದ್ದೇವೆ. ಅದೇ ರೀತಿ ಈ ಬಾರಿಯೂ ನಿಭಾಯಿಸಲು ಎಲ್ಲಾ ಅಧಿಕಾರಿಗಳು ಸಜ್ಜಾಗಬೇಕು. ಸಾರ್ವಜ ನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ . ಸಾರ್ವಜನಿಕರು ಸಮಸ್ಯೆ ನಿವಾರಣೆಗೆ ಮನವಿ ಮಾಡಿದರೆ, ಕೇವಲ ಪತ್ರ ವ್ಯವಹಾರ ಮಾಡುತ್ತಾ ಕೂರದೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕಳೆದ ಬಾರಿ ಎಲ್ಲೆಲ್ಲಿ ಭೂಕುಸಿತವಾಗಿತ್ತು ಈ ಬಾರಿ ಎಲ್ಲೆಲ್ಲಿ ಸಂಭವಿಸಬಹುದು ಎಂಬ ಬಗ್ಗೆ ಮಾಹಿತಿ ಪಟ್ಟಿ ಕಲೆಹಾಕಿ. ಅಧಿಕಾರಿಗಳು ಅತಿವೃಷ್ಟಿ, ಅನಾವೃಷ್ಟಿಗೆ ಹಾನಿ ನಿರ್ವಹಣೆ ಬಗ್ಗೆ ನಿಖರ ವರದಿ ಸಲ್ಲಿಸಿದರೆ ಸರಿಯಾಗಿ ಅನುದಾನ ಬಿಡುಗಡೆಯಾಗುತ್ತದೆಎಂದು


ಕಳೆದ ಬಾರಿ ಅತಿವೃಷ್ಟಿ, ಅನಾವೃಷ್ಟಿ ಕಾಮಗಾರಿಗಳಿಗಾಗಿ ಇಂಜಿನಿಯರಿಂಗ್ ವಿಭಾಗಕ್ಕೆ ₹4.50 ಕೋಟಿ, ಲೋಕೋಪಯೋಗಿ ಇಲಾಖೆಗೆ ₹8 ಕೋಟಿ ಒಟ್ಟು ₹12.50 ಕೋಟಿ ಮಂಜೂರಾಗಿದೆ. ಕ್ಷೇತ್ರದಲ್ಲಿವಿದ್ಯತ್ ಕಂಬಗಳ ಕೊರತೆ ಇಲ್ಲ. ಎಲ್ಲಾ ಸಲಕರಣೆ ಲಭ್ಯವಿದೆ. ಮಳೆಗಾಲದಲ್ಲಿ ಸೇತುವೆ, ಕಾಲು ಸಂಕ ದಾಟಿ ಬರುವ ಪ್ರದೇಶಗಳ ಅಂಗನವಾಡಿ-ಶಾಲಾ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ, ಸಿಡಿಪಿಓ ಇಲಾಖೆಗಳು ಹೆಚ್ಚಿನ ನಿಗಾ ವಹಿಸಬೇಕು. ಮಳೆಗಾಲದಲ್ಲಿ ಇಂತಹ ಪ್ರದೇಶಗಳಿಂದ ಬರುವ ಮಕ್ಕಳ ಪೋಷಕರ ಜತೆ ಶಿಕ್ಷಕರು, ಅಂಗನವಾಡಿ ಶಿಕ್ಷಕಿಯರು, ಕಾರ್ಯಕರ್ತೆಯರು ಸಂಪರ್ಕದಲ್ಲಿರಬೇಕು. ಅಧಿಕ ಮಳೆ ವೇಳೆ ರಜೆ ಅಗತ್ಯವಾದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ರಜೆ ಘೋಷಿಸಿ. ಒಟ್ಟಾರೆಯಾಗಿ ಅತಿವೃಷ್ಟಿ, ಅನಾ ವೃಷ್ಟಿ ಎದುರಿಸಲು ಸರ್ವ ಸನ್ನದ್ಧರಾಗಿರಬೇಕೆಂದು ಆದೇಸಿದರು.

ಸಭೆಯ ಅಧ್ಯಕ್ಷತೆಯನ್ನು ಶಾಸಕ ಟಿ.ಡಿ.ರಾಜೇಗೌಡ ವಹಿಸಿದ್ದರು. .ವೇದಿಕೆಯಲ್ಲಿ ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ತಾಲೂಕು ಪಂಚಾಯಿತಿ ಇ.ಓ.ನವೀನ್ ಕುಮಾರ್, ಕೆಡಿಪಿ ಸದಸ್ಯರು, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಭಾಗವಹಿಸಿದ್ದರು

-- ಬಾಕ್ಸ್ --

ಐದು ಕಡೆಗಳಲ್ಲಿ ಕಂಟ್ರೋಲ್ ರೂಂ: ನೂರಲ್ ಹುದಾ

ಈಗಾಗಲೇ 5 ಕಡೆ ಕಂಟ್ರೋಲ್ ರೂಂ ತೆರೆಯಲಾಗಿದೆ. ಒಂದನ್ನು ಬರುವ ಫೋನ್‌ ಕರೆಗಳಿಗಾಗಿಯೇ ಮೀಸಲಿಡಲಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ದೂರು ಬಂದರೆ 24 ಗಂಟೆಗಳ ದೂರವಾಣಿ ಕರೆ ಸ್ವೀಕರಿಸಲು ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ ಎಂದು ತಹಸೀಲ್ದಾರ್ ಡಾ.ನೂರಲ್ ಹುದಾ ಮಾಹಿತಿ ನೀಡಿದರು.

ತಾಲೂಕಿನಲ್ಲಿ 4 ಮಳೆ ಮಾಪನಗಳಿವೆ. ತಾಲೂಕು ಮಟ್ಟದ 19 ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿ ತಂಡ ರಚಿಸಲಾಗಿದೆ. ನುರಿತ ಈಜುಗಾರರು, ಉರಗ ತಜ್ಙರು, ಗುತ್ತಿಗೆದಾರರು, ಜೆಸಿಬಿ, ಹಿಟಾಚಿ ಮಾಲೀಕರ ದೂರವಾಣಿ ನಂಬರ್ ಹಾಗೂ ಮಾಹಿತಿ ಪಟ್ಟಿ ಮಾಡಲಾಗಿದೆ. ಜಾನುವಾರುಗಳಿಗೆ ಈಗಾಗಲೇ ಎನ್.ಆರ್.ಪುರದಲ್ಲಿ ಶ್ರೀ ಜ್ವಾಲಾಮಾಲಿನಿ ಅತಿಶಯ ಕ್ಷೇತ್ರ ಹಾಗೂ ಬಾಳೆಹೊನ್ನೂರಿನಲ್ಲಿ ಶ್ರೀ ರಂಭಾಪುರಿ ಪೀಠದ ಗೋಶಾಲೆ ಹಾಗೂ ತಾಲೂಕಿನಲ್ಲಿ 17 ಕಾಳಜಿ ಕೇಂದ್ರಗಳನ್ನು ಗುರ್ತಿಸಲಾಗಿದೆ. ಸಮುದಾಯ ಭವನ, ಕಲ್ಯಾಣ ಮಂಟಪಗಳ, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮಾಹಿತಿ ಸಂಗ್ರಹಿಸಿಸಲಾಗಿದೆ ಎಂದರು.