ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸ್ವಾತಂತ್ರ್ಯ ಯೋಧ ಟಿ.ಎಸ್. ಸುಬ್ಬಣ್ಣ ಅವರ 33ನೇ ಸಂಸ್ಮರಣೆಯು ಸೆ.13 ರಂದು ಬೆಳಗ್ಗೆ 10ಕ್ಕೆ ನಗರದ ವಿದ್ಯಾರಣ್ಯಪುರಂನ ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ.ಗುಂಡ್ಲುಪೇಟೆಯ ಮಾಜಿ ಶಾಸಕರೂ ಆದ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ನಿರಂಜನಕುಮಾರ್ ಅಧ್ಯಕ್ಷತೆ ವಹಿಸುವರು. ಮೈಸೂರು ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್ ಕಾರ್ಯಕ್ರಮ ಉದ್ಘಾಟಿಸುವರು. ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ.ಸರ್ವಮಂಗಳಾಬಾಯಿ ನುಡಿನಮನ ಸಲ್ಲಿಸುವರು. ಶಾಸಕ ಟಿ.ಎಸ್. ಶ್ರೀವತ್ಸ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್, ಪಾಲಿಕೆ ಮಾಜಿ ಸದಸ್ಯ ಎಂ. ಸುನಿಲ್ ಮುಖ್ಯ ಅತಿಥಿಯಾಗಿರುವರು. ಸಂಸ್ಥೆಯ ಕಾರ್ಯದರ್ಶಿ ಪ್ರೊ.ಜಿ.ಸಿ. ರಾಜಣ್ಣ ಪ್ರಾಸ್ತಾವಿಕ ಭಾಷಣ ಮಾಡುವರು. ಖಜಾಂಚಿ ಡಾ.ಪಿ.ಎನ್. ಹರೀಶ್, ಧರ್ಮದರ್ಶಿಗಳಾದ ಬಿ. ಸುವರ್ಣಾದೇವಿ, ಡಾ.ಬಿ. ನಾಗರಾಜಮೂರ್ತಿ, ಪ್ರೊ.ಎಚ್.ಎಂ. ವಸಂತಮ್ಮ, ಡಿ. ನಾಗುನಾಯ್ಕ್, ಡಾ.ಎ.ಎಸ್. ಚಂದ್ರಶೇಖರ್ ಉಪಸ್ಥಿತರಿರುವರು.
ಸಂಕ್ಷಿಪ್ತ ಪರಿಚಯಟಿ.ಎಸ್. ಸುಬ್ಬಣ್ಣ ಅವರು ನಂಜನಗೂಡು ತಾ. ತಗಡೂರಿನ ಶಿವಾರ್ಚಕರಾದ ಈಶ್ವರಪ್ಪ, ಪಾರ್ವತಮ್ಮ ಅವರ ಪುತ್ರರಾಗಿ 1905 ರಲ್ಲಿ ಜನಿಸಿದರು. ಸ್ವಗ್ರಾಮದಲ್ಲಿ ಪ್ರಾಥಮಿಕ, ಮೈಸೂರಿನ ವೆಸ್ಲಿ ಮಿಷನ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಶಿಕ್ಷಕ ವೆಂಕಟಕೃಷ್ಣಯ್ಯ ಅವರಿಂದ ಪ್ರೇರೇಪಿತರಾಗಿ ಎಂ.ಎನ್. ಜೋಯಿಸ್, ಶಾರದಾಪ್ರಸಾದ್ ಮೊದಲಾದವರೊಡಗೂಡಿ ಸ್ವಾತಂತ್ರ್ಯ ಹೋರಾಟಕ್ಕಿಳಿದರು. ಶಿರಸಿ, ಅಂಕೋಲಾ, ಸಿದ್ದಾಪುರ, ಶಿವಪುರ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡರು.
ಗುಜರಾತಿನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾಗ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರಿಂದ ಪ್ರಭಾವಿತರಾಗಿ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ 11 ಪ್ರೌಢಶಾಲೆ, ಬಾಲಕರು ಹಾಗೂ ಬಾಲಕಿಯರಿಗೆ ಎರಡು ಪ್ರತ್ಯೇಕ ಹಾಸ್ಟೆಲ್‌ಗಳನ್ನು ಆರಂಭಿಸಿದರು. ಈ ಹಾಸ್ಟೆಲ್ ಗಳಲ್ಲಿ ಯಾವುದೇ ಜಾತಿ,ಧರ್ಮ ಭೇದವಿಲ್ಲದೆ ಪ.ಜಾತಿಯವರಿಂದ ಹಿಡಿದು ಎಲ್ಲಾ ವರ್ಗದ ಬಡ ಮಕ್ಕಳಿಗೆ ಪ್ರವೇಶ ನೀಡಲಾಗುತ್ತಿತ್ತು.ಸೂರ್ಯೋದಯಕ್ಕೆ ಮುನ್ನಾ ಹಾಸ್ಟೆಲ್‌ನ ಎಲ್ಲಾ ವಿದ್ಯಾರ್ಥಿಗಳು ಪ್ರಾರ್ಥನೆಗೆ ಹಾಜರಾಗುವುದು ಕಡ್ಡಾಯವಾಗಿತ್ತು. ರಾಷ್ಟ್ರೀಯ ಹಬ್ಬಗಳಂದು ಪ್ರಭಾತ್ ಪೇರಿ, ಧ್ವಜಾರೋಹಣ, ಸಹಪಂಕ್ತಿ ಭೋಜನ ಇರುತ್ತಿತ್ತು. ಸುಬ್ಬಣ್ಣನವರು ಕೂಡ ಪಾಲ್ಗೊಳ್ಳುತ್ತಿದ್ದರು. ಸಬರಮತಿ ಆಶ್ರಮದಲ್ಲಿ ತಾವು ವೀಕ್ಷಿಸಿದಂತೆ ಇಲ್ಲಿ ಕೂಡ ಪ್ರಾರ್ಥನೆ, ಬೋಧನೆ, ಸಾಮೂಹಿಕ ಭಜನೆ, ಸರಳತೆ, ದೇಶಭಕ್ತಿ, ಶಿಸ್ತು, ಸಭ್ಯತೆ ಮೊದಲಾದವನ್ನು ಕಾರ್ಯರೂಪಕ್ಕೆ ತಂದರು. ಬಡಮಕ್ಕಳ ಆರೋಗ್ಯ, ಶಿಕ್ಷಣ, ಊಟ, ವಸತಿ, ಶುಚಿತ್ವಕ್ಕಾಗಿ ಜೀವನಪರ್ಯಂತ ದುಡಿದರು.ಅಂತರಜಾತಿ ವಿವಾಹ ಪ್ರೋತ್ಸಾಹಿಸಿದರು. ಕಾರ್ಮಿಕರು ಹಾಗೂ ಮಾಲೀಕರೊಂದಿಗೂ ನಿಕಟ ಸಂಪರ್ಕ ಹೊಂದಿ, ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತಿದ್ದರು.
ಪ್ರಚಾರದಿಂದ ಗಾವುದ ದೂರ ಉಳಿದಿದ್ದ ಸುಬ್ಬಣ್ಣವರು ಯಾವುದೇ ವೇದಿಕೆ ಏರುತ್ತಿರಲಿಲ್ಲ. ತಮ್ಮ ಭಾವಚಿತ್ರ ತೆಗೆಯಲು ಬಂದ ಛಾಯಾಗ್ರಾಹಕನನ್ನು ಕೋಲಿಡಿದು ಅಟ್ಟಿಸಿಕೊಂಡು ಹೋಗಿದ್ದರು. 1991ರ ಸೆ.13 ರಂದು ನಿಧನರಾದರು.ಮರೆಯಲಾಗದ ಮಾಣಿಕ್ಯ
ಹೆಗ್ಗಡದೇವನಕೋಟೆ ತಾಲೂಕು ಕ್ಯಾತನಹಳ್ಳಿಯಲ್ಲಿ ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿರುವ ರಮೇಶ್ ಬಿಳಿಕೆರೆಯವರು ಮೈಸೂರು ಭಾಗದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಟಿ.ಎಸ್. ಸುಬ್ಬಣ್ಣ ಅವರನ್ನು ಕುರಿತ ‘ಮರೆಯಲಾಗದ ಮಾಣಿಕ್ಯ‘ ಕೃತಿ ರಚಿಸುವ ಮೂಲಕ ಬಡವರಿಗಾಗಿ ಬ್ರಹ್ಮಚರ್ಯ ತೊಟ್ಟ ಸ್ವಾತಂತ್ರ್ಯ ಸೇನಾನಿಯ ಸರಳ, ನಿಸ್ವಾರ್ಥ ಬದುಕನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ.ಸುಬ್ಬಣ್ಣನವರ ಬಾಲ್ಯ, ದೇಶ ಸೇವೆಗಾಗಿ ಶಾಲೆಯನ್ನು ತೊರೆದಿದ್ದು, ದಲಿತೋದ್ಧಾರಕ್ಕಾಗಿ ಸಬರಮತಿ ಆಶ್ರಮಕ್ಕೆ ಹೊರಟಿದ್ದು, ಅನಾಥರ ಆಶ್ರಯಕ್ಕಾಗಿ ಸಾರ್ವಜನಿಕ ವಿದ್ಯಾರ್ಥಿನಿಲಯ, ಸಮಾನತೆ ಸೃಷ್ಟಿಗಾಗಿ ಶಾಲೆಗಳನ್ನು ಆರಂಭಿಸಿದ್ದು, ಅಂತರ್ಜಾತಿ ವಿವಾಹ ನಡೆಸಿದ್ದು, ಜೀವನದುದ್ದಕ್ಕೂ ಶಿಸ್ತಿನ ಸಿಪಾಯಿಯಾಗಿ ಸಂಬಂಧಿಕರನ್ನೂ ಸಹ ಹತ್ತಿರ ಸುಳಿಯದಂತೆ ಬದುಕಿದ್ದು, ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಕೀರ್ತಿಶನಿ ತೊಲಗಾಚೆ.. ಎಂಬಂತೆ ಯಾವುದೇ ಪ್ರಚಾರ, ಪದವಿ, ಪುರಸ್ಕಾರ, ಪ್ರಶಸ್ತಿ ಬಯಸದೇ ರಾಜಗೌರವವನ್ನು ನಿರಾಕರಿಸಿ ಬದುಕಿದ್ದು, ‘ಜಲಗಾರ’ ನಾಟಕದಿಂದ ಸ್ಫೂರ್ತಿಗೊಂಡಿದ್ದು, ಸರ್ವರಿಗೂ ಸಮಾಜವಾದ ಬೋಧಿಸಿದ್ದು, ಸಿರಿತನಕ್ಕೆ ತಲೆ ಬಾಗದ್ದು. ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಮಹಿಳೆಯರಿಗೂ ಮನ್ನಣೆ ನೀಡಿದ್ದು- ಇವೇ ಮೊದಲಾದ ಹತ್ತು ಹಲವು ಕುತೂಹಲಕಾರಿ ಸಂಗತಿಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಈ ಕೃತಿ ಕೇವಲ ಯುವಪೀಳಿಗೆಗೆ ಮಾತ್ರವಲ್ಲದೇ ಇಂದಿನ ಸ್ವಾರ್ಥ ಸಮಾಜದಲ್ಲಿ ಸುಬ್ಬಣ್ಣನವರು ಹೇಗೆ ನಿಸ್ವಾರ್ಥತೆಯಿಂದ ‘ಸಾರ್ವಜನಿಕರ’ ಒಳಿತಾಗಿ ಬಾಳಿದರು ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ.