ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರು
ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಡಾ.ವೈ.ಡಿ. ರಾಜಣ್ಣ ಅವರನ್ನು ಪಲ್ಲಕ್ಕಿ ರಥದಲ್ಲಿ ವಿವಿಧ ಕಲಾತಂಡಗಳು, ಸ್ತಬ್ಧಚಿತ್ರ ಹಾಗೂ ಪೂರ್ಣಕುಂಭ ಕಳಶ, ನಾನಾ ಜಾನಪದ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮರೆವಣಿಗೆ ಮಾಡುವ ಮೂಲಕ ಸಮ್ಮೇಳನಕ್ಕೆ ಬರಮಾಡಿಕೊಳ್ಳಲಾಯಿತು.ಸಮ್ಮೇಳನ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ತಾಲೂಕು ಕಸಾಪ ಅಧ್ಯಕ್ಷ ಎಂ. ಕೆಂಡಗಣ್ಣಸ್ವಾಮಿ ಪಲ್ಲಕ್ಕಿಯಲ್ಲಿ ಹಾಸಿನರಾಗಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷರು, ಶಾಸಕ ಅನಿಲ್ ಚಿಕ್ಕಮಾದು ಅವರು ಸಮ್ಮೇಳನಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅವರಿಗೆ ಮೈಸೂರು ಪೇಟ ಧರಿಸಿ, ಶಾಲು ಹೊದಿಸಿ, ಹಾರ ಹಾಕಿ ಮೆರವಣಿಗೆಗೆ ಚಾಲನೆ ನೀಡಿದರು.ತಾಲೂಕಿನ ವಿವಿಧ ಶಾಲೆಗಳ ಮಕ್ಕಳು ನಾನಾ ಸ್ತಬ್ಧಚಿತ್ರಗಳನ್ನು ಪ್ರದರ್ಶನ ನೀಡಿದರು. ಇದಲ್ಲದೆ ಡೊಳ್ಳು ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ ಉತ್ತಮ ಪ್ರದರ್ಶನ ನೀಡಲಾಯಿತು. ಸತ್ತಿಗೆ ಸೂರಪಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಕೆಇಬಿ ಕಚೇರಿಯಿಂದ ಹೊರಟ ಮೆರವಣಿಗೆಯೂ ಕೆಎಸ್.ಆರ್.ಟಿ ಬಸ್ ನಿಲ್ದಾಣ ಮೂಲಕ ಚಿಕ್ಕದೇವಮ್ಮನ ವೃತ್ತ, ಬಸವೇಶ್ವರ ದೇವಸ್ಥಾನದ ಮೂಲಕ ಸಂತೇ ಮಾಸ್ತಮ್ಮನ ದೇವಸ್ಥಾನ ತಲುಪಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಬಳಿಕ ಬ್ಯಾಂಕ್ ರಸ್ತೆ ಮೂಲಕ ಜಯ ಚಾಮರಾಜೇಂದ್ರ ಕ್ರೀಡಾಂಗಣವನ್ನು ತಲುಪಿತು.ಮೆರವಣಿಗೆ ಹಿನ್ನೆಲೆ ಪಟ್ಟಣದ ವರ್ತಕರು ತಮ್ಮ ಮುಂಗ್ಗಟ್ಟುಗಳಲ್ಲಿ ಕನ್ನಡದ ಬಾವುಟಗಳನ್ನು ಹಾರಿಸಿದರು. ಪಟ್ಟಣದ ಪ್ರತಿ ಮನೆಯಂಗಳದಲ್ಲಿ ರಂಗೋಲಿ ಬಿಡಿಸಿ, ತಳಿರು ತೋರಣಗಳನ್ನು ಕಟ್ಟಿದ್ದು, ಜನರ ಗಮನ ಸೆಳೆದವು.
ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಹೇಮಾವತಿ ರಮೇಶ್, ಚೈತ್ರಸ್ವಾಮಿ, ಸಣ್ಣತಾಯಮ್ಮ, ಚಂದ್ರಕಲಾ ರಾಜಣ್ಣ, ನೂರಾಳಸ್ವಾಮಿ, ಉಮಾರಾಮಚಂದ್ರ, ಶ್ರೀನಿವಾಸ್, ದಿವ್ಯಾ ನವೀನ್ಕುಮಾರ್, ಚಲುವಕೃಷ್ಣ, ವಿನಾಯಕ ಪ್ರಸಾದ್, ಜನಪ್ರತಿನಿಧಿಗಳು, ವಿವಿಧ ಪಕ್ಷದ ಮುಖಂಡರು, ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.ಯುವಕರು ಹೆಚ್ಚಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುವಂತೆ ಮಾಡಬೇಕು: ಅನಿಲ್ ಚಿಕ್ಕಮಾದು
ಕನ್ನಡಪ್ರಭ ವಾರ್ತೆ ಸರಗೂರುಯುವಕರು ಹೆಚ್ಚಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಕರೆ ನೀಡಿದರು.
ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜನೆ ಮಾಡಿದ ಸರಗೂರು ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸರಗೂರು 2018ರಲ್ಲಿ ತಾಲೂಕಾಗಿ ಘೋಷಣೆಯಾದ ಬಳಿಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ. ತಾಲೂಕಿನ ಕನ್ನಡ ಪ್ರಮೋದ್ ಅವರ ಸಹಕಾರದಿಂದ ನಾನು ಶಾಸಕನಾಗಿದಾಗಿನಿಂದಲೂ 5 ಸಮ್ಮೇಳನ ಮಾಡಿದ್ದೇವೆ. ತಂದೆಯವರ ಕಾಲದಲ್ಲಿ ಎರಡು ಸಮ್ಮೇಳನ ಮಾಡಿದ್ದೇವೆ ಎಂದರು.
ಕನ್ನಡ ಹಲವಾರು ಕಾರ್ಯಕ್ರಮಗಳಿಗೆ ಧ್ರುವನಾರಾಯಣ್ ಅವರು ಸಹಕಾರ ನೀಡಿದ್ದರು. ಪರಿಷತ್ತಿನವರು 18 ವರ್ಷದಿಂದ 30 ವರ್ಷ ಒಳಪಟ್ಟ ಯುವಕರನ್ನು ಹೆಚ್ಚಾಗಿ ಸಾಹಿತ್ಯ ಪರಿಷತ್ತಿನ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು. ಆ ಮೂಲಕ ಯುವಕರೂ ಹೆಚ್ಚಾಗಿ ಸಮ್ಮೇಳನಗಳಲ್ಲಿ ಭಾಗವಹಿಸುವಂತೆ ಮಾಡಬೇಕು. ಡಾ.ವೈ.ಡಿ. ರಾಜಣ್ಣ ಎರಡೂ ತಾಲೂಕಿನಲ್ಲಿ ಪಶುವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಈ ಸಮ್ಮೇಳನದ ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಚಾರ ಎಂದರು.ಕಲೆ, ಸಂಸ್ಕೃತಿ ಕಾಪಾಡುವುದು ನಮ್ಮ ಜವಾಬ್ದಾರಿ:
ಸಂಸದ ಸುನಿಲ್ ಬೋಸ್ ಮಾತನಾಡಿ, ಸರಗೂರು ತಾಲೂಕಿನಲ್ಲಿ ಪ್ರಥಮ ಬಾರಿಗೆ ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡಿರುವುದು ಸಂತಸದ ವಿಚಾರ. ನಾಲ್ವಡಿಯವರು ಸ್ಥಾಪನೆ ಮಾಡಿದ್ದು, ಇದರ ಉದೇಶ ಕನ್ನಡವನ್ನು ಕಾಪಾಡುವುದು. ಕಳೆದ ಬಾರಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸರ್ಕಾರ ಅದ್ಧೂರಿಯಾಗಿ ನಡೆಸಿಕೊಟ್ಟಿತು. ನಮ್ಮ ನಾಡು, ಕಲೆ, ಸಂಸ್ಕೃತಿಯನ್ನು ಪ್ರಚಾರಕ್ಕೆ ತಂದು ಅದನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂದರು.