ಸಾರಾಂಶ
ಬೆಂಗಳೂರಿನ ಹಿರಿಯ ತಬಲಾ ಕಲಾವಿದ ಬಿ.ಎಸ್.ವೇಣುಗೋಪಾಲ ರಾಜು ಅವರಿಗೆ ಕೆ.ಎಸ್ ಹಡಪದ ಪ್ರಶಸ್ತಿ ಪ್ರಕಟವಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ತಬಲಾ ವೇಣು ಎಂದೇ ಪ್ರಸಿದ್ಧರಾದ ಬೆಂಗಳೂರಿನ ಹಿರಿಯ ತಬಲಾ ಕಲಾವಿದ ಬಿ.ಎಸ್.ವೇಣುಗೋಪಾಲ ರಾಜು ಅವರಿಗೆ ನಗರದ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾವು 2024ನೇ ಸಾಲಿನ ಪಂಡಿತ ಕೆ.ಎಸ್. ಹಡಪದ ಪ್ರಶಸ್ತಿ ಪ್ರಕಟಿಸಿದೆ.ಪ್ರಶಸ್ತಿಯು ಹತ್ತು ಸಾವಿರ ರು. ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ.
ಸಭಾದ ಗೌರವಾಧ್ಯಕ್ಷ ಮ.ವಿ. ರಾಮಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಮಲ್ಲಿಕಾರ್ಜುನ ಚಿಕ್ಕಮಠ, ಶಂಕರ ಹಲಗತ್ತಿ, ಪ್ರಕಾಶ ಬಾಳಿಕಾಯ, ಡಾ.ಎ.ಎಲ್. ದೇಸಾಯಿ, ಸುರೇಶ ಎಸ್. ಮಂಗಳೂರು, ಸಂಗೀತ ಬಿದನೂರ ಅವರನ್ನೊಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ.ಜೂ.2 ರಂದು ಮೈಸೂರಿನ ಗಾನಭಾರತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಭೀಮಾಶಂಕರ ಬಿದನೂರ ತಿಳಿಸಿದ್ದಾರೆ.