ತಡಕೋಡ ಗಲಭೆ ಪ್ರಕರಣ: ಬಂಧಿತ ಆರೋಪಿಗಳಿಗೆ ಜಾಮೀನು

| Published : Feb 07 2024, 01:50 AM IST

ಸಾರಾಂಶ

ಜ. 24ರಂದು ಗ್ರಾಮದಲ್ಲಿ ಹಿಂದೂ ಯುವಕರು ಸದ್ದಾಂ ಹುಸೇನ್ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದರು. ಜೊತೆಗೆ ಗ್ರಾಮದ ಮುಸ್ಲಿಂ ಪ್ರಾರ್ಥನಾ ಕಟ್ಟಡದ ಗುಂಬಜ್‌ಗೆ ಧಕ್ಕೆ ಮಾಡಿದ್ದರು.

ಧಾರವಾಡ: ತಾಲೂಕಿನ ತಡಕೋಡ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ 15 ಜನ ಹಿಂದೂ ಕಾರ್ಯಕರ್ತರು ಜಾಮೀನಿನ ಮೇಲೆ ಇದೀಗ ಬಿಡುಗಡೆಯಾಗಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಉದ್ಘಾಟಿಸುವ ಮುನ್ನಾದಿನ ಜನವರಿ 21ರಂದು ತಾಲೂಕಿನ ತಡಕೋಡ ಗ್ರಾಮದ ಸದ್ದಾಂ ಹುಸೇನ್ ಎಂಬ ಯುವಕ ಅಯೋಧ್ಯಾ ರಾಮಮಂದಿರದ ಮೇಲೆ ಹಸಿರು ಬಾವುಟ ಹಾರಿಸಿದ್ದ ಚಿತ್ರವನ್ನು ತನ್ನ ವಾಟ್ಸಪ್‌ ಸ್ಟೇಟಸ್ ಇಟ್ಟುಕೊಂಡಿದ್ದನು. ಅಲ್ಲದೇ ಪಾವರ್ ಆಫ್ ಇಸ್ಲಾಂ ಎಂಬ ಘೋಷಣೆ ಸಹ ಹಾಕಿಕೊಂಡಿದ್ದನು. ಆ ಚಿತ್ರದಲ್ಲಿ ಓವೈಸಿ ಫೋಟೋ ಕೂಡ ಇತ್ತು. ಇದನ್ನು ನೋಡಿದ ಕೂಡಲೇ ಎಚ್ಚೆತ್ತುಕೊಂಡಿದ್ದ ಗರಗ ಠಾಣೆ ಪೊಲೀಸರು ಆತನ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಜೈಲಿಗಟ್ಟಿದ್ದರು.

ಈ ಘಟನೆ ನಡೆದ ಬಳಿಕ ಜ. 24ರಂದು ಗ್ರಾಮದಲ್ಲಿ ಹಿಂದೂ ಯುವಕರು ಸದ್ದಾಂ ಹುಸೇನ್ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದರು. ಜೊತೆಗೆ ಗ್ರಾಮದ ಮುಸ್ಲಿಂ ಪ್ರಾರ್ಥನಾ ಕಟ್ಟಡದ ಗುಂಬಜ್‌ಗೆ ಧಕ್ಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಜ. 25ರಂದು 15 ಜನರನ್ನು ಬಂಧಿಸಿದ್ದರು. ಬಂಧಿತರಾದ ಯುವಕರ ಪೈಕಿ ಹೆಚ್ಚಿನವರು ಬಿಜೆಪಿ ಕಾರ್ಯಕರ್ತರೇ ಆಗಿದ್ದು, ಘಟನೆಯಲ್ಲಿ ಕಾಂಗ್ರೆಸ್ ಯುವಕರು ಇದ್ದರೂ ಅವರನ್ನು ಬಂಧಿಸಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಅಲ್ಲದೇ ಕಾಂಗ್ರೆಸ್ ಮುಖಂಡರು ಪೊಲೀಸರ ಮೇಲೆ ಒತ್ತಡ ಹೇರಿ ತಮ್ಮ ಕಾರ್ಯಕರ್ತರನ್ನು ಬಂಧಿಸದಂತೆ ತಡೆದಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಮುಖಂಡರು, ಪೊಲೀಸರು ನ್ಯಾಯಯುತವಾಗಿ ವರ್ತಿಸಲಿ ಎಂದೂ ಆಗ್ರಹಿಸಿದ್ದರು.

ಇದೇ ವೇಳೆ ಮಾಜಿ ಶಾಸಕ ಅಮೃತ ದೇಸಾಯಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್ ಅವರಿಗೆ ಮನವಿ ಪತ್ರವನ್ನು ನೀಡಿ, ಸರಿಯಾದ ತನಿಖೆ ಮಾಡುವಂತೆಯೂ ಕೋರಿದ್ದರು. ಈ ಮಧ್ಯೆ ಗಲಾಟೆಗೆ ಸಂಬಂಧಿಸಿದಂತೆ ಗರಗ ಠಾಣೆ ಪಿಎಸೈ ಡಿ. ಪ್ರಕಾಶ ಅವರನ್ನು ಅಮಾನತ್ತು ಸಹ ಮಾಡಲಾಗಿತ್ತು. ಇದೆಲ್ಲ ಮುಗಿದ ಬಳಿಕ ಇದೀಗ ಗಲಭೆ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿದ್ದ 15 ಕಾರ್ಯಕರ್ತರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇಲ್ಲಿಯ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ಕಾರ್ಯಕರ್ತರನ್ನು ಮಾಜಿ ಶಾಸಕ ಅಮೃತ ದೇಸಾಯಿ ಸಿಹಿ ಹಂಚಿ ಸ್ವಾಗತಿಸಿಕೊಂಡರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮೃತ ದೇಸಾಯಿ, ಘಟನೆ ನಡೆದ ದಿನ ನಾನು ಊರಲ್ಲಿ ಇರಲಿಲ್ಲ. ಅವತ್ತು ಪೊಲೀಸರು ಬಂಧಿಸಿದ್ದ ಎಲ್ಲರೂ ಅಮಾಯಕರು. ಆ ಗ್ರಾಮದಲ್ಲಿ ಎಲ್ಲರೂ ಸೌಹೌರ್ದಯುತವಾಗಿ ಇದ್ದಾರೆ. ಸದ್ದಾಂ ಹುಸೇನ್ ಹೀಗೇಕೆ ಮಾಡಿದ ಅಂತಾ ಕೇಳಲು ಆತನ ಮನೆಗೆ ಹೋಗಿದ್ದಾರೆ. ಅಲ್ಲದೇ ಅಲ್ಲಿನ ಮುಸ್ಲಿಂ ಸಮುದಾಯದವರು ಕೂಡ ಯುವಕನ ಕೃತ್ಯವನ್ನು ಖಂಡಿಸಿದ್ದಾರೆ. ಆದರೆ, ಆ ಸಮುದಾಯದವರಿಗೆ ಯುವಕರ ವಿರುದ್ಧ ದೂರು ನೀಡುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಆದರೆ ಅವರು ದೂರು ನೀಡಲು ನಿರಾಕರಿಸಿದ್ದರಿಂದ ಪೊಲೀಸರೇ ಹಿಂದೂ ಯುವಕರ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಿದ್ದರು. ಇದೀಗ ಅವರೆಲ್ಲ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದರು.

ಅವಹೇಳನಕಾರಿ ಪೋಸ್ಟ್‌: ಯುವಕನ ಬಂಧನಕುಂದಗೋಳ ಪಟ್ಟಣದ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ಕುರಿತು ಅವಹೇಳನಕಾರಿ ಸಂದೇಶ ಹಾಕಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಭಾನುವಾರ ಕುಂದಗೋಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ನಾಸೀರ್ ಮೆಹಬೂಬ ಕಳ್ಳಿಮನಿ ಎಂಬ ಯುವಕ ಹಿಂದೂ ಧರ್ಮದ ಯುವತಿಯ ಕುಂಕುಮ ಅಳಿಸುವ ಸಂದೇಶದ ವಿಡಿಯೋ ಒಂದನ್ನು ತನ್ನ ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿದ್ದ. ಇದನ್ನು ಗಮನಿಸಿದ ಕುಂದಗೋಳ ಪೊಲೀಸ್ ಠಾಣೆಯ ಸಿಪಿಐ ಶಿವಾನಂದ ಅಂಬಿಗೇರ ಹಾಗೂ ಪೊಲೀಸರು ಯುವಕನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.