ಸಾರಾಂಶ
ಟೇಕ್ವಾಂಡೋ ಗರ್ಲ್ ಚಿತ್ರದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ತಾವು ಹೇಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಕುರಿತ ಮಹತ್ತರ ಸಂದೇಶ ನೀಡಲಾಗಿದೆ ಎಂದು ಚಿತ್ರದ ನಿರ್ದೇಶಕ ರವೀಂದ್ರ ವಂಶಿ ಹೇಳಿದರು.
ಹುಬ್ಬಳ್ಳಿ: ಆತ್ರೇಯ ಕ್ರಿಯೇಶನ್ಸ್ ಬ್ಯಾನರ್ ಅಡಿ ಡಾ. ಸುವಿತಾ ಪ್ರವೀಣ್ ನಿರ್ಮಾಣದ ‘ಟೇಕ್ವಾಂಡೋ ಗರ್ಲ್’ ಕನ್ನಡ ಚಲನಚಿತ್ರ ಆ. 30ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ರವೀಂದ್ರ ವಂಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟೇಕ್ವಾಂಡೋ ಗರ್ಲ್ ಚಿತ್ರದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ತಾವು ಹೇಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಕುರಿತ ಮಹತ್ತರ ಸಂದೇಶ ನೀಡಲಾಗಿದೆ. ಚಿತ್ರದಲ್ಲಿ 200ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದ್ದು, ಇದೊಂದು ಅದ್ಭುತ ಚಿತ್ರವಾಗಿದೆ ಎಂದರು.ಈ ಚಿತ್ರದಲ್ಲಿ ಟೇಕ್ವಾಂಡೋ ಗರ್ಲ್ ಆಗಿ ಪುಟ್ಟ ಬಾಲಕಿ ಋತುಸ್ಪರ್ಶ ಪ್ರಥಮಬಾರಿಗೆ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಶಾಲೆಯ ಮಕ್ಕಳಿಗೆ ಈ ಚಿತ್ರವು ಪ್ರೇರಣೆಯಾಗಲಿದ್ದು, ಪ್ರತಿಯೊಬ್ಬರು ತಮ್ಮ ಮಕ್ಕಳೊಂದಿಗೆ ನೋಡಲೆಬೇಕಾದ ಚಿತ್ರ ಇದಾಗಿದೆ. ಶಾಲಾ ಮಕ್ಕಳಿಗೆ ಶೇ. 50ರಷ್ಟು ರಿಯಾಯಿತಿ ದರದಲ್ಲಿ ಚಿತ್ರದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಟೇಕ್ವಾಂಡೋ ಕ್ರೀಡೆಯು ಓಲಂಪಿಕ್ ಕ್ರೀಡಾಕೂಟಕ್ಕೆ ಸೇರ್ಪಡೆಯಾಗಿರುವುದರಿಂದ ಚಿತ್ರದಲ್ಲಿನ ಸಾಹಸ ಮತ್ತು ಪ್ರತಿಯೊಂದು ಸನ್ನಿವೇಶಗಳು ಪ್ರೇಕ್ಷಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗುತ್ತದೆ. ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಯ ಮಕ್ಕಳಿಗೆ ಈ ಚಿತ್ರವನ್ನು ತೋರಿಸಬೇಕು ಎಂಬುದು ನಿರ್ಮಾಪಕರ ಹೆಬ್ಬಯಕೆಯಾಗಿದೆ. ತಾರಾಗಣದಲ್ಲಿ ಡಾ. ಸುಮಿತ ಪ್ರವೀಣ್, ಪ್ರವೀಣ್ ಸಿ. ಬಾನು, ಪಲ್ಲವಿ ರಾವ್, ಸಹನಶ್ರೀ, ರವಿ, ಸ್ವಾತಿ ಶಿವಮೊಗ್ಗ, ರೇಖಾ ಕೊಡ್ಲಿಗಿ ಅಭಿನಯಿಸಿದ್ದಾರೆ ಎಂದರು.ಚಿತ್ರದ ನಿರ್ಮಾಪಕಿ ಹಾಗೂ ಋತುಸ್ಪರ್ಶ ಅವರ ತಾಯಿ ಡಾ. ಸಿಮಿತ್ ಪ್ರವೀಣ್ ಮಾತನಾಡಿ, ಮಗಳು ಋತುಸ್ಪರ್ಶ ಕೇವಲ ಮೂರು ವರ್ಷದವಳಿದ್ದಾಗಲೇ ಆತ್ಮರಕ್ಷಣೆಯ ಕಲೆಯಲ್ಲಿ ಒಂದಾದ ಟೇಕ್ವಾಂಡೋ ಕಲೆ ಕಲಿತುಕೊಂಡಳು. ಅವಳ ಈ ಕಲೆಯ ಸಾಹಸವೇ ನಮಗೆ ಈ ಚಿತ್ರ ನಿರ್ಮಾಣಕ್ಕೆ ಕಾರಣವಾಯಿತು ಎಂದರು.
ಈ ವೇಳೆ ನಾಯಕ ನಟಿ ಋತುಸ್ಪರ್ಶ, ಸಹ ನಿರ್ಮಾಪಕ ಪ್ರವೀಣ್ ಸಿ. ಭಾನು ಸೇರಿದಂತೆ ಹಲವರಿದ್ದರು.