ಸಾರಾಂಶ
ರಾಜ್ಯದಲ್ಲಿ ಗೊಬ್ಬರದ ಅಭಾವದಿಂದ ರೈತರಿಗೆ ತೊಂದರೆ ಆಗುತ್ತಿರುವ ಹಿನ್ನಲೆಯಲ್ಲಿ ತಹಸೀಲ್ದಾರ್ ಪರುಶಪ್ಪ ಕುರುಬ ಅವರು ಪಟ್ಟಣದ ಗೊಬ್ಬರ ಮಾರಾಟ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ರಾಜ್ಯದಲ್ಲಿ ಗೊಬ್ಬರದ ಅಭಾವದಿಂದ ರೈತರಿಗೆ ತೊಂದರೆ ಆಗುತ್ತಿರುವ ಹಿನ್ನಲೆಯಲ್ಲಿ ತಹಸೀಲ್ದಾರ್ ಪರುಶಪ್ಪ ಕುರುಬ ಅವರು ಪಟ್ಟಣದ ಗೊಬ್ಬರ ಮಾರಾಟ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿದರು.ಈ ಭಾಗದ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಭತ್ತ, ರಾಗಿ ಹಾಗೂ ಮುಸುಕಿನ ಜೋಳ ಬಿತ್ತನೆ ಆಗಿದ್ದು, ರೈತರಿಗೆ ಈ ಗೊಬ್ಬರದ ಅವಶ್ಯಕತೆ ಇದೆ. ಆದರೆ ಈ ಬಾರಿ ಸಕಾಲದಲ್ಲಿ ಗೊಬ್ಬರದ ಅಭಾವ ಉಂಟಾಗಿ ರೈತರು ಜಮೀನಿನಲ್ಲಿನ ಕೆಲಸ ಬಿಟ್ಟು ಗೊಬ್ಬರಕ್ಕಾಗಿ ಅಲೆದಾಡುತ್ತಿದ್ದಾರೆ. ಈ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೃತಕ ಅಭಾವ ಸೃಷ್ಟಿ ಆಗಿರಬಹುದು ಎಂದು ಎಲ್ಲಾ ಗೊಬ್ಬರ ಮಾರಾಟ ಮಳಿಗೆಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಮಳಿಗೆಗೆ ಆದ ಗೊಬ್ಬರ ಸರಬರಾಜು, ವಿತರಣೆ ಹಾಗೂ ದಾಸ್ತಾನು ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಸ್ಥಳೀಯ ರೈತರಿಗೆ ಮೊದಲು ಗೊಬ್ಬರ ನೀಡಿ ಉಳಿದಲ್ಲಿ ಜಿಲ್ಲೆಯ ಇತರೆ ತಾಲೂಕಿನ ರೈತರಿಗೆ ಕೊಡಬೇಕು. ಮಾತ್ರವಲ್ಲ ಆಧಾರ್ ಕಾರ್ಡ್ ಪರಿಶೀಲನೆ ಮಾಡಿ ನಿಗದಿತ ಬೆಲೆಗೆ ಮಾರಾಟ ಮಾಡಬೇಕು ಎಂದು ಮಾರಾಟಗಾರರಿಗೆ ತಿಳುವಳಿಕೆ ನೀಡಿದ ಅವರು, ನಿರ್ವಹಣೆ ಮಾಡದವರಿಗೆ ನೋಟಿಸ್ ನೀಡುವಂತೆ ಸಹಾಯಕ ಕೃಷಿ ಅಧಿಕಾರಿ ರಾಮಪ್ಪ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಎಸ್.ವಿಜಯ್, ರಾಜಸ್ವ ನಿರೀಕ್ಷಕ ಎಸ್.ರಾಜು, ಸಹಾಯಕ ಕೃಷಿ ಅಧಿಕಾರಿ ರಾಮಪ್ಪ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಅಣ್ಣಪ್ಪ, ಸ್ವಾಮಿ ಹಾಜರಿದ್ದರು.