ಕನ್ನಡಪ್ರಭವಾರ್ತೆ ಹುಳಿಯಾರು
ಇಲ್ಲಿನ ನಾಡಕಚೇರಿಯ ಸಮಸ್ಯೆಗಳ ಕುರಿತು ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಮತಾ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದ ವಾಸ್ತವಿಕ ಪರಿಸ್ಥಿತಿಯನ್ನು ಖುದ್ದಾಗಿ ಅರಿತ ಅವರು, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕಂಡುಕೊಳ್ಳಲು ಸೂಚಿಸಿದರು. ನಾಡಕಚೇರಿಗೆ ಮತ್ತೊಬ್ಬ ಕಂಪ್ಯೂಟರ್ ಆಪರೇಟರ್ ಒದಗಿಸಲು ನಿಯಮಗಳಲ್ಲಿ ಸದ್ಯಕ್ಕೆ ಅವಕಾಶವಿಲ್ಲದಿರುವುದನ್ನು ಮನಗಂಡು ಮೊದಲು ಮಹಿಳೆಯರು ಹಾಗೂ ವಯೋವೃದ್ಧರ ಕೆಲಸಗಳನ್ನು ಮಾಡಿಕೊಡುವಂತೆ ಸೂಚಿಸಿದರು.ಸಾರ್ವಜನಿಕರ ಇತರ ಮೂಲಸೌಕರ್ಯಗಳ ಕಡೆಗೆ ತಕ್ಷಣ ಗಮನಹರಿಸಿ ಕಚೇರಿಗೆ ಬರುವ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಹಾಗೂ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯನ್ನು ಕಲ್ಪಿಸುವ ಸಂಬಂಧ ಹುಳಿಯಾರು ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಚರ್ಚಿಸಿದರು.ಸ್ಥಳೀಯ ದಾನಿಗಳಾದ ನಟರಾಜುಗುಪ್ತರವರನ್ನು ಕರೆಸಿ ಮೂಲಸೌಕರ್ಯಕ್ಕೆ ತಮ್ಮ ನೆರವನ್ನು ಕೋರಿದರು ಬುಧವಾರ ಆಸನ ಹಾಗೂ ನೆರಳಿನ ವ್ಯವಸ್ಥೆಯ ಕಾಮಗಾರಿಗಳು ಕಾರ್ಯಪ್ರವೃತ್ತವಾಗಲಿವೆ. ಇದೇ ಸಂದರ್ಭದಲ್ಲಿ ನಾಡಕಚೇರಿಯಲ್ಲಿ ಸಾರ್ವಜನಿಕರಿಗೆ ಸೂಕ್ತ ಶೌಚಾಲಯದ ವ್ಯವಸ್ಥೆಯನ್ನು ಒದಗಿಸಿಕೊಡುವ ಕುರಿತೂ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ವಿನುತಾ, ಕಂದಾಯ ತನಿಖಾಧಿಕಾರಿ ಶ್ರೀನಿವಾಸ್, ಹುಳಿಯಾರು ಹೋಬಳಿಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.