ತಹಸೀಲ್ದಾರ್ ನೂರುಲ್ ಹುದಾ ಪರಿಶೀಲನೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಮರಾಠಿ ಕ್ಯಾಂಪ್, ಚೌಡಿಗದ್ದೆ ಗ್ರಾಮದಲ್ಲಿ ಚಿರತೆ, ಹುಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಡಾ.ನೂರಲ್ ಹುದಾ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನೂರುಲ್ ಹುದಾ ಮಾತನಾಡಿ ಬೈರಾಪುರ ಗ್ರಾಮ ಹಾಗೂ ಮರಾಠಿ ಕ್ಯಾಂಪ್ ಮದ್ಯೆ ಲಕ್ಕವಳ್ಳಿ ಭದ್ರಾ ಅಭಯಾರಣ್ಯ ಬರುತ್ತಿದೆ. ಈ ಭಾಗದ ರಸ್ತೆಯಲ್ಲೇ ಮಕ್ಕಳು ಬೈರಾಪುರ ಶಾಲೆಗೆ ಹೋಗುತ್ತಿದ್ದರು. ಆ ರಸ್ತೆಯಲ್ಲಿ ಚಿರತೆ, ಹುಲಿ ಕಾಣಿಸಿಕೊಂಡಿದೆ. ಚಿರತೆ ಹಿಡಿಯಲು ಬೋನ್ ಇಟ್ಟು ಕಾಯಲಾಗುತ್ತಿದೆ.

ಕಾಡು ದಾರಿಯ ಎರಡು ಕಡೆ ಗಿಡ, ಗಂಟೆಗಳನ್ನು ಅರಣ್ಯ ಇಲಾಖೆಯವರು ಸ್ವಚ್ಛಗೊಳಿಸಿದ್ದಾರೆ. ಆದರೆ, ಗ್ರಾಮಸ್ಥರು ಅರಣ್ಯ ಮಧ್ಯೆ ಹಾದು ಹೋಗುವ ರಸ್ತೆಬಿಟ್ಟು ಪರ್ಯಾಯ ರಸ್ತೆ ನಿರ್ಮಿಸಿಕೊಡುವಂತೆ ಈಗಾಗಲೇ ಮನವಿ ಮಾಡಿದ್ದಾರೆ. ಪರ್ಯಾಯ ರಸ್ತೆ ನಿರ್ಮಿಸ ಬೇಕಾದ ಸ್ಥಳದಲ್ಲಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ಖಾತೆ ಜಮೀನು ಬರುವುದರಿಂದ ಅವರೊಂದಿಗೆ ಚರ್ಚಿಸಬೇಕಾಗಿದೆ. ಮರಾಠಿ ಕ್ಯಾಂಪ್ ನ ಸಮುದಾಯ ಭವನದಲ್ಲಿಯೇ ಮಕ್ಕಳಿಗೆ ಅಂಗನವಾಡಿ ನಡೆಸಲು ಅನುಕೂಲ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಗ್ರಾಮದಲ್ಲೆ ಮಕ್ಕಳಿಗೆ ಆಹಾರ ಸೌಲಭ್ಯ ಒದಗಿಸುತ್ತೇವೆ ಎಂದು ಸಿಡಿಪಿಓ ತಿಳಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಒಪ್ಪಿಕೊಂಡಿದ್ದಾರೆ ಎಂದರು.


ಈ ಸಂದರ್ಭದಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್, ಸಿಡಿಪಿಓ ವೀರಭದ್ರಯ್ಯ ಮಾಜಿಗೌಂಡರ್, ಮುತ್ತಿನಕೊಪ್ಪ ಗ್ರಾಪಂ ಮಾಜಿ ಸದಸ್ಯ ದೇವಂತ್ ಗೌಡ, ಕಂದಾಯ ನಿರೀಕ್ಷಕ ಮಂಜುನಾಥ್ ,ಗ್ರಾಮಸ್ಥರು ಇದ್ದರು.