ಸಾರಾಂಶ
ಕನ್ನಡಪ್ರಭ ವಾರ್ತೆ ಅಳ್ನಾವರ
ಸಮಾಜಕ್ಕೆ ಪೀಡುಗಾಗಿರುವ ಮಾದಕ ದ್ರವ್ಯಗಳ ಮಾರಾಟ ಮತ್ತು ಸೇವನೆಯನ್ನು ತಡೆಗಟ್ಟಲು ಪೊಲೀಸರು ಕೈಕೊಳ್ಳುವ ಕಾರ್ಯದಲ್ಲಿ ಸಾರ್ವಜನಿಕರು ಕೈ ಜೋಡಿಸುವುದು ಅವಶ್ಯವಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ ಹೇಳಿದರು
ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಅಳ್ನಾವರದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಮಾತನಾಡಿದರು.
ಸಮಾಜದಲ್ಲಿ ನಡೆಯುವ ಹೆಚ್ಚಿನ ಅಪರಾಧಗಳಿಗೆ ಮಾದಕ ದ್ರವ್ಯ ಸೇವನೆಯೇ ಕಾರಣವಾಗುತ್ತಿದೆ. ಇದರಿಂದ ಒಂದೆಡೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದರೆ ಇನ್ನೊಂದೆಡೆ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವಕರು ತಮ್ಮ ಬದುಕನ್ನು ಅರ್ಧಕ್ಕೆ ಮೊಟಕುಗೊಳಿಸಿಕೊಳ್ಳುತ್ತಿದ್ದು, ಇಂತಹ ವ್ಯಕ್ತಿಗಳು ಸಮಾಜ ಮತ್ತು ಕುಟುಂಬಕ್ಕೆ ಭಾರವಾಗುತ್ತಿದ್ದಾರೆ ಎಂದರು.
ಸಮಾಜಕ್ಕೆ ಕಂಟಕವಾಗಿರುವ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ತಡೆಯಲು ಪ್ರತಿಯೊಬ್ಬರು ಕಂಕಣ ಬದ್ಧರಾಗಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಎಸ್.ಪಿ. ಬ್ಯಾಕೋಡ ಅಭಿಪ್ರಾಯ ಪಟ್ಟರು.
ಅಳ್ನಾವರ ಸರಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಜಯಂತಿ ನಾಯಕ ಮಾತನಾಡಿ, ಮಾದಕ ದ್ರವ್ಯಗಳು ಸಮಾಜಕ್ಕೆ ಹೇಗೆ ಮಾರಕ ಎಂದು ವಿವರಿಸಿ ಇಂದಿನ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದು, ಇದಕ್ಕೆ ಪಾಲಕರು ಮತ್ತು ಸಮಾಜವೂ ಕಾರಣವಾಗುತ್ತಿದೆ. ತಮ್ಮ ಮಕ್ಕಳ ನಿತ್ಯದ ಚಟುವಟಿಕೆ ಮೇಲೆ ನಿಗಾ ಇಡುವದು ಆಯಾ ಪಾಲಕರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಆಧುನಿಕ ಬದುಕಿಗೆ ಮಾರು ಹೋಗುತ್ತಿರುವ ಮಕ್ಕಳು ಮಾನಸಿಕ ಸ್ಥಿತಿಯನ್ನು ಕಳೆದುಕೊಳ್ಳುತ್ತಿದ್ದು, ಮನೆಯಲ್ಲಿ ಸಂಸ್ಕಾರಯುತ ಬದುಕನ್ನು ಕಲಿಸುವ ಮೂಲಕ ಮಕ್ಕಳನ್ನು ಸರಿ ದಾರಿಯಲ್ಲಿ ಮುನ್ನಡೆಯುವಂತೆ ನೋಡಿಕೊಳ್ಳಬೇಕು. ಇಂತಹ ಚಟಗಳಿಂದ ಹೊರ ಬರಲು ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಪ್ರಮಾಣ ಮಾಡಿಕೊಳ್ಳಬೇಕು ಎಂದರು.
ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು. ತರಬೇತಿ ನಿರತ ಐಪಿಎಸ್ ಅಧಿಕಾರಿ ಗೌರವ ಬಿ.ಸಿ. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಜ್ಜಪ್ಪ ಕುರುಬರ, ಸಿಪಿಐ ಸಮೀರ ಮುಲ್ಲಾ ಮತ್ತು ನಾಗನಗೌಡರ, ಪಿಎಸ್‌ಐ ಪ್ರವೀಣ ನೇಸರಗಿ, ಸತ್ತಾರ ಬಾತಖಂಡೆ, ಕಸಾಪ ಅಧ್ಯಕ್ಷ ಗುರುರಾಜ ಸಬನೀಸ, ನಾರಾಯಣ ಮೋರೆ, ಪ್ರವೀಣ ಪವಾರ, ಲಿಂಗರಾಜ ಮೂಲಿಮನಿ, ಸಂತೋಷ ಕಮ್ಮಾರ, ಸುರೇಂದ್ರ ಕಡಕೋಳ, ಮಾಜಿ ಸೈನಿಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.