ಸಾರಾಂಶ
ಹಾಸನ ; ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಣ ಲೂಟಿಯಾಗಿದ್ದು, ಇಂತಹ ಪ್ರಕರಣವನ್ನು ಬೇರು ಸಮೇತ ಕಿತ್ತುಹಾಕಬೇಕು. ಈ ರೀತಿಯ ಮೊಕದ್ದಮೆಯನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಂಡರೆ ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಸಲಹೆ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ವಾಲ್ಮೀಕಿ ನಿಗಮದ ಕೋಟ್ಯಂತರ ಹಣ ಲೂಟಿಕೋರರ ಪಾಲಾಗಿದೆ. ಎಂಬುದನ್ನು ನಾವು ಖಂಡಿಸುತ್ತೇವೆ. ಇದು ಒಂದು ನಿಗಮದ ನಿದರ್ಶನ ಅಷ್ಟೆ! ಭ್ರಷ್ಟಾಚಾರ ಕಡಿಮೆ ಆಗುತ್ತಿಲ್ಲ, ಬೆಳೆಯುತ್ತಿದೆ. ಆಡಳಿತ ನಡೆಸುವವರು ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ ಎಂದು ಬಾಯಿಯಲ್ಲಿ ಮಾತ್ರ ಹೇಳುತ್ತಾರೆ. ಅವರಿಂದ ಸಾಧ್ಯವಾಗುತ್ತಿಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಿದೆ. ಇದನ್ನು ಹಾಗೇ ಬಿಡದೇ ಬೇರು ಸಮೇತ ಕಿತ್ತು ಹಾಕಬೇಕು ಎಂದರೆ ಸಾಧ್ಯವೇ? ಒಳ್ಳೆಯ ಬೆಳೆ ಬರಬೇಕಾದರೆ ಕಳೆ ಕೀಳಲೇಬೇಕು. ಒಳ್ಳೆಯ ಸಮಾಜ ನಿರ್ಮಾಣವಾಗಬೇಕಾದರೆ ಕಳೆ ಕೀಳದಿದ್ದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವೇ ಆಗುವುದಿಲ್ಲ’ ಎಂದು ಹೇಳಿದರು.
‘ಇದನ್ನು ಸಣ್ಣ ಹಗರಣ ಎಂದು ನಾವು ಭಾವಿಸಿಲ್ಲ. ಇದು ಬಹಳ ದೊಡ್ಡ ಹಗರಣ. ಫೇಕ್ ಖಾತೆ ತೆರೆದು ಇಲ್ಲಿಂದ ಹಣ ವರ್ಗಾಯಿಸಿ ಅಲ್ಲಿಂದ ಹಣ ಡ್ರಾ ಮಾಡಿಕೊಳ್ಳುತ್ತಾರೆ ಎಂದರೆ ಈ ಕೃತ್ಯ ಸಣ್ಣವರಿಂದ ಆಗಿಲ್ಲ. ದೊಡ್ಡವರಿಂದಲೇ ನಡೆದಿರುವ ಹೇಯ ಕೃತ್ಯ. ಇಂತಹ ಹಲವು ಪ್ರಕರಣ ನಡೆದರೂ ಯಾವ ಶಿಕ್ಷೆ ಆಗಿಲ್ಲ. ದುಡ್ಡು ಕೊಟ್ಟು ಮುಚ್ಚಿ ಹಾಕುವ ಸಂದರ್ಭಗಳೇ ಸಾಕ್ಷಿ. ಸಾರ್ವಜನಿಕ ಆಸ್ತಿ ಮತ್ತು ಹಣವನ್ನು ಯಾರು ಕಾಯಬೇಕು? ಆದರೆ ಕಾಯುವವರೇ ಮೇಯುವವರು ಆಗಿದ್ದಾರೆ. ಮಂದಗತಿಯಲ್ಲಿ ಇಂತಹ ಪ್ರಕರಣ ತನಿಖೆ ಮಾಡದೆ ಶೀಘ್ರಗತಿಯಲ್ಲಿ ನಡೆಸಬೇಕು’ ಎಂದು ಒತ್ತಾಯಿಸಿದರು.
ಇಂತಹ ಮೊಕದಮ್ಮೆಯನ್ನು ಶೀಘ್ರ ವಿಲೇವಾರಿ ಮಾಡಬೇಕು. ವಿಶೇಷ ನ್ಯಾಯಾಲಯ ಮಾಡಿ ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಂಡರೆ ಬೇರೆಯವರಿಗೂ ಒಂದು ಉತ್ತಮ ಸಂದೇಶ ಹೋದಂತಾಗುತ್ತದೆ. ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣ ಬೇರೆ ಬೇರೆ ಕಡೆ ಇದ್ದು, ಈ ಕಡೆ ನಿಗಾವಹಿಸಿ ತನಿಖೆ ಮಾಡಿಸಿ ಶಿಸ್ತುಕ್ರಮ ಕೈಗೊಳ್ಳಲಿ. ಸಾರ್ವಜನಿಕರ ಆಸ್ತಿ ಹಣದ ವಾರಸ್ತುದಾರರಿಗೆ ಸರ್ಕಾರದ ಪ್ರತಿನಿಧಿ ಅಧಿಕಾರದ ವರ್ಗದವರು ಕ್ರಮ ಜರುಗಿಸಲಿ ಎಂದು ಆಗ್ರಹಿಸಿದರು.